ಕುಶಾಲನಗರ, ಏ. ೨೯: ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸುಮಾರು ೨೫ ವರ್ಷಗಳಿಗೂ ಹೆಚ್ಚಿನ ಕಾಲದಿಂದ ತೊಡಗಿಸಿಕೊಂಡಿರುವ ಕೂಡುಮಂಗಳೂರು ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಗಫಾರ್ ಸದ್ಯಕ್ಕೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಸೂಕ್ತ ನೆರವು ಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರಗ ಸಂರಕ್ಷಕ ಅಬ್ದುಲ್ ಗಫಾರ್, ಕುಶಾಲನಗರ, ಕೂಡಿಗೆ, ಕೂಡುಮಂಗಳೂರು, ವ್ಯಾಪ್ತಿ ಮಾತ್ರವಲ್ಲದೆ, ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಅನೇಕರಿಗೆ ಸ್ನೇಕ್ ಗಫಾರ್ ಎಂದೇ ಪರಿಚಿತನಾಗಿದ್ದೇನೆ.

ಈ ಭಾಗಗಳಲ್ಲಿ ಎಲ್ಲಿಯೇ ಭಯಹುಟ್ಟಿಸುವ ಹಾವುಗಳು ಮನೆಗಳಲ್ಲಿ, ತಮ್ಮ ವಠಾರದಲ್ಲಿ ಕಾಣಿಸಿಕೊಂಡ ತಕ್ಷಣ ತನ್ನನ್ನು ಸಂಪರ್ಕಿಸುತ್ತಾರೆ. ಎಂತಹ ವೇಳೆಯಲ್ಲಾದರೂ ನಾನು ಆ ಪ್ರದೇಶಕ್ಕೆ ಸೇರಿ ಅವರ ಭಯಗಳನ್ನು ನಿವಾರಣೆ ಮಾಡುತ್ತೇನೆ. ಅಲ್ಲಿ ಸಂರಕ್ಷಿಸಲ್ಪಟ್ಟ ಸಾವಿರಾರು ಹಾವುಗಳನ್ನು ಜೀವಂತವಾಗಿ ಸಮೀಪದ ಕಾಡಿಗೆ ಬಿಡುವ ಕೆಲಸವನ್ನು ಮಾಡಿದ್ದೇನೆ. ಇಂತಹ ಕಠಿಣ ಕೆಲಸವನ್ನು ಮಾಡುತ್ತಿದ್ದಾಗ ಸುಮಾರು ಐದು ಬಾರಿ ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿ, ಅದರಿಂದ ಪ್ರಾಣ ಉಳಿಸಿಕೊಂಡಿದ್ದೇನೆ.

ಆದರೆ ಇತ್ತೀಚಿಗೆ ಒಂದು ವರ್ಷದ ಹಿಂದೆ ಮತ್ತೊಮ್ಮೆ ನಾಗರಹಾವು ಕಚ್ಚಿದ ಪರಿಣಾಮ ಜಿಲ್ಲಾ ಕೇಂದ್ರವಾದ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದೆ.

ಆ ಸಂದರ್ಭದಲ್ಲಿ ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲು ನನ್ನ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿ, ಅಲ್ಲಿನ ವೈದ್ಯರ ಸೂಚನೆಗೆ ಮೈಸೂರಿನ ಜಯದೇವ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಸ್ವಲ್ಪ ಸುಧಾರಣೆಯಾದಂತೆ ಕಂಡಾಗ, ವೈದ್ಯರು ನನ್ನನ್ನು ಪರಿಶೀಲಿಸಿದ ನಂತರ, ಮಡಿಕೇರಿಯ ಆಸ್ಪತ್ರೆಯಲ್ಲಿ ಸ್ವಲ್ಪ ಕಾಲ ‘ಅಬ್ಸರ್ವೇಷನ್’ ಇರಲು ಸಲಹೆ ನೀಡಿ ಮನೆಗೆ ಹೋಗಬಹುದು ಎಂದರು. ಮಡಿಕೇರಿಗೆ ಬಂದಾಗ ಅಲ್ಲಿನ ವೈದ್ಯರು ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ಪುನಹ ನಾನು ಮೈಸೂರಿನ ಆಸ್ಪತ್ರೆಗೆ ಬಂದು ಅಲ್ಲಿನ ವೈದ್ಯರನ್ನು ಕಂಡೆ, ನನ್ನನ್ನು ಕೇವಲ ಔಪಚಾರಿಕ ಪರೀಕ್ಷೆ ಮಾಡಿ, ಆರು ಗಂಟೆಗಳ ಕಾಲ ಇರಿಸಿಕೊಂಡು ಈಗ ನೀವು ಚೆನ್ನಾಗಿದ್ದೀರಿ ಮನೆಗೆ ಹೋಗಿ ಎಂದು ಕಳುಹಿಸಿದರು. ಮನೆಗೆ ಬಂದ ಮೇಲೆ ನನಗೆ ಅಸಾಧ್ಯವಾದ ತಲೆನೋವು ಕಾಣಿಸಿಕೊಂಡು ತುಂಬಾ ನರಳಿದೆ. ನನ್ನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ, ಇತ್ತೀಚಿನವರೆಗೂ ಆ ಎಲ್ಲಾ ನೋವು ಸಹಿಸಿಕೊಂಡಿದ್ದೆ. ಕುಶಾಲನಗರದ ವೈದ್ಯರ ಬಳಿ ಹೋಗಿ ಅಲ್ಲಿ ಅವರು ಕೊಟ್ಟ ಸಲಹೆಯಂತೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಿದೆ. ಅದರಲ್ಲಿ ನನಗೆ ಬ್ರೈನ್ ಟ್ಯೂಮರ್ ಇದೆ ಎಂಬ ಲ್ಯಾಬ್ ವರದಿ ಬಂದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈಗ ಒಂದು ವರ್ಷದಿಂದ ಸರಿಯಾದ ಚಿಕಿತ್ಸೆ ಇಲ್ಲದೇ, ವೈದ್ಯರ ನಿರ್ಲಕ್ಷ, ನನಗೆ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ನರಳುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನೇ ಆಸರೆಯಾಗಿದ್ದು , ಸಮಾಜ ಸೇವಕನಾಗಿ, ಪರಿಸರ ಸಂರಕ್ಷಕನಾಗಿ ಅಳಿಲುಸೇವೆ ಮಾಡುತ್ತಿದ್ದ ನನಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದರು.

ಸಂಘ ಸಂಸ್ಥೆಗಳು ಯಾವುದೇ ರೂಪದಲ್ಲಿ ತನಗೆ ಆಸರೆಯಾಗಬೇಕಿದೆ ಎಂದರು. ಸಹಾಯ ಮಾಡಲು ಇಚ್ಛಿಸುವವರು: ೯೯೦೦೩೭೧೦೦೧. ಸಂಖ್ಯೆಗೆ ಸಂಪರ್ಕಿಸುವAತೆ ಕೋರಿದ್ದಾರೆ.