ಸೇವೆ ಅಂದರೆ ನಿಸ್ವಾರ್ಥವೇ, ತ್ಯಾಗವೇ, ಸ್ವಾರ್ಥದ ಮುಖವಾಡವೇ, ವೃತ್ತಿಯೊ, ಹಣ ಹಾಗೂ ಅಧಿಕಾರದ ಪ್ರಚಾರದ ಮೋಹವೊ, ನಾಯಕತ್ವದ ಪ್ರದರ್ಶನವೊ? ಬದುಕಿನ ಸಾರ್ಥಕತೆಯೊ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಒಂದು ಸಣ್ಣ ಪ್ರಯತ್ನ.

ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ ಒಂದು ರೀತಿಯ ಸೇವೆ. ಇನ್ನೊಂದು ರೀತಿಯ ಸೇವೆ ಪ್ರತಿಫಲ ಪಡೆದು ಕೆಲಸ ಮಾಡುವುದು. ಅವುಗಳು ಸರ್ಕಾರಿ ಸೇವೆ, ವಿದ್ಯಾ ಕ್ಷೇತ್ರ, ನಾಗರಿಕ ಸೇವೆ, ವೈದ್ಯಕೀಯ ಸೇವೆ, ಸೇನೆ, ಪೊಲೀಸ್ ಸೇರಿ ದೇಶದ ಸೇವೆ, ರೈತರದು, ವ್ಯಾಪಾರ, ಸಾರಿಗೆ ಹೀಗೆ ನಾವು ಅಥವಾ ಸರಕಾರ ಸಂಘ-ಸAಸ್ಥೆಗಳು ಈ ವಿಭಾಗದ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಇವೆ. ಇಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದರೂ ಸೇವಾ ಮನೋಭಾವ ಇರುತ್ತಿತ್ತು. ಹಿಂದೆ ಇದ್ದ ಸೇವಾ ಮನೋಭಾವನೆ ಈಗ ಯಾವ ಕ್ಷೇತ್ರದಲ್ಲೂ ಇಲ್ಲ. ಇಂದು ಸೇವೆ ಎಂಬುದು ಬಿಕರಿಯ ವಸ್ತುವಾಗಿದೆ. ಸಮಾಜದಲ್ಲಿ ಇದು ವ್ಯಾಪಾರಿ ಮನೋಭಾವದಿಂದ ಕೂಡಿದೆ. ಅದು ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದು ಆಗಿರಬಹುದು ಅಥವಾ ಪ್ರತಿಫಲ ಅಪೇಕ್ಷೆ ಪಡೆದು ಮಾಡುವುದು ಆಗಿರಬಹುದು. ಅದಕ್ಕೆ ಕೆಲವು ಉದಾಹರಣೆ ನೀಡುತ್ತೇನೆ. ಒಂದಷ್ಟು ವರುಷಗಳ ಹಿಂದೆ ನಮ್ಮ ಹಿರಿಯರ ಕಾಲದಲ್ಲಿ ಸಾಧಾರಣವಾಗಿ ಸಮಾಜದಲ್ಲಿ ಸ್ಥಿತಿವಂತರು ಬೆರಳೆಣಿಕೆಯಷ್ಟೇ ಇದ್ದರೂ ಅವರು ಊರಿನ ಅಭಿವೃದ್ಧಿಗೆ, ದೇವಸ್ಥಾನ, ಜಾತ್ರೆ, ಹಾಸ್ಪಿಟಲ್, ಶಾಲೆ ನಿರ್ಮಾಣಗಳಿಗೆ ಜಾಗ ಹಾಗೂ ಹಣ ಸಹಾಯ ಮಾಡುತ್ತಿದ್ದರು. ಅಂದು ಯಾವುದೇ ಪ್ರಚಾರ ಮಾಡದ ಸೇವೆ ಇಂದಿಗೂ ಸಮಾಜದಲ್ಲಿ ಉಳಿದಿದೆ. ಇಂದು ಸಮಾಜ ಸೇವೆಯ ಸಂಘ-ಸAಸ್ಥೆಗಳು ಹುಟ್ಟಿಕೊಂಡಿವೆ. ಕೆಲವು ಸಂದರ್ಭಕ್ಕೆ ತಕ್ಕಂತೆ ಹುಟ್ಟಿಕೊಳ್ಳುತ್ತವೆೆ. ಇನ್ನು ಕೆಲವರಿಗೆ ಬರಿ ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವುದೇ ಅವರ ಕಾಯಕ. ಅಂದು ಅವರು ಮಾಡಿದ ಕೆಲಸಕ್ಕೆ ಯಾವುದೇ ಪ್ರತಿಫಲ ನಿರೀಕ್ಷೆ ಇಟ್ಟುಕೊಳ್ಳುತ್ತಿರಲಿಲ್ಲ. ಇನ್ನು ಎರಡನೇ ಕ್ಷೇತ್ರದಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದುಕೊಂಡರೂ ಇವರಿಗೆ ಸೇವಾ ಮನೋಭಾವ ಕಂಡುಬರುತ್ತಾ ಇತ್ತು. ಉದಾಹರಣೆಗೆ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಆಗ ಸೇವೆ ಮುಖ್ಯವಾಗಿತ್ತು. ಹಿಂದೆ ಕೆಲಸಕ್ಕೆ ಸಂಬಳ ತೆಗೆದುಕೊಳ್ಳುತ್ತಿದ್ದರೂ ಜನರಿಗೆ ಸೇವೆ ಮಾಡುವ ಉದ್ದೇಶ ಇತ್ತು. ಅಂದು ಸರಕಾರಿ ಕಚೇರಿಗೆ ಒಂದು ಸಮಸ್ಯೆ ತೆಗೆದುಕೊಂಡು ಹೋದರೆ ಅದಕ್ಕೆ ಪರಿಹಾರ ಸಿಗುತ್ತಿತ್ತು. ಇಂದು ಸಮಸ್ಯೆ ಒಂದನ್ನು ತೆಗೆದುಕೊಂಡು ಹೋದರೆ ಅದು ನೂರು ಸಮಸ್ಯೆಯಾಗಿ ಪರಿವರ್ತನೆಯಾಗಿ ಉತ್ತರ ಸಿಗದೇ ಪರಿತಪಿಸುವಂತೆ ಆಗಿಬಿಡುತ್ತದೆ.

ಸಮಾಜದಲ್ಲಿ ಮಾನವನಿಗೆ ಮುಖ್ಯವಾದವು ರಾಜಕೀಯ ಕ್ಷೇತ,್ರ ವಿದ್ಯಾ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಇಂದು ಸೇವೆ ಎಂಬ ಶಬ್ದ ಸಂಪೂರ್ಣವಾಗಿ ಸತ್ತುಹೋಗಿ ವರ್ಷಗಳಾಯಿತು. ರಾಜಕೀಯದಲ್ಲಿ ಬಂಡವಾಳ ಹಾಕಿ ಬಂಡವಾಳ ಪಡೆಯುವುದು ಬಿಟ್ಟರೆ ಇಲ್ಲಿ ಜನಸೇವೆಗೆ ಅವಕಾಶವಿಲ್ಲ. ಚುನಾವಣೆಗೆ ಕೋಟಿಗಟ್ಟಲೆ ಖರ್ಚು ಮಾಡಿ ಅಧಿಕಾರಕ್ಕೆ ಬರುವುದು. ಬಂದ ನಂತರ ವಾಮಮಾರ್ಗದಲ್ಲಿ ಅದನ್ನು ವಾಪಸ್ ಪಡೆಯುವ ಮಾರ್ಗ ರೂಪಿಸುವುದು. ವೈದ್ಯಕೀಯ ಕ್ಷೇತ್ರವಂತೂ ಸಂಪೂರ್ಣ ಕೆಟ್ಟುನಿಂತಿದೆ. ಹಾಸ್ಪಿಟಲ್‌ಗಳೆಂದರೆ ಹಣ ಕೊಟ್ಟು ಹೆಣ ತರುವ ಫ್ಯಾಕ್ಟರಿಯಾಗಿ ಪರಿವರ್ತನೆ ಗೊಂಡಿದೆ. ಇದರ ಕರ್ಮಕಾಂಡ ಬರೆಯುತ್ತಾ ಹೋದರೆ ಸಂಪುಟಗಳ ಪುಸ್ತಕವಾದೀತು. ಬಡವರ ಪಾಲಿಗೆ ಉತ್ತಮ ವೈದ್ಯಕಿಯ ಸೇವೆ, ಒಳ್ಳೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ದೇಶದ ಸೇವೆ ಮಾಡಲು ಸೇರಿದ್ದೇವೆ ಅನ್ನುವುದು ಹಸಿ ಸುಳ್ಳು. ಸೇನೆಗೆ ದೇಶದ ಸೇವೆಗೆ ಎಂದು ಯಾರು ಸೇರುವುದಿಲ್ಲ. ಎಲ್ಲರೂ ಕೆಲಸಕ್ಕಾಗಿ ಸೇರುತ್ತಿದ್ದರು. ಆದರೆ ಹಿಂದೆ ಕೆಲಸಕ್ಕೆ ಸೇರಿದ ನಂತರ ದೇಶದ ಮೇಲಿನ ಅಭಿಮಾನದಿಂದ ಕೆಲಸ ಮಾಡುತ್ತಿದ್ದರು. ಅದು ಕೂಡ ಎಲ್ಲರೂ ಅಲ್ಲ. ಈಗ ಅದು ಹೆಚ್ಚಿನವರಿಗೆ ಉದ್ಯೋಗ ಮಾಡುವ ಕ್ಷೇತ್ರವಾಗಿದೆ. ಸೇನೆ ಗಡಿಗಳಲ್ಲಿ ಕಾರ್ಯನಿರ್ವಹಿಸುವ ಯೋಧರು ನಿಜವಾಗಲೂ ಕಷ್ಟಪಡುತ್ತಾರೆ. ಹೆಚ್ಚಿನವರು ತಮ್ಮ ಸೇವಾ ಅವಧಿಯನ್ನು ಮುಗಿಯೋದು ಕಾಯುತ್ತಾ ಇರುತ್ತಾರೆ. ಕನಿಷ್ಟ ಸೇವಾ ಅವಧಿ ಮುಗಿಸಿ ಪಿಂಚಣಿ ಪಡೆದು ಹೊರಗೆ ಬಂದು ನಾಗರಿಕ ಸೇವೆಗೆ ಸೇರಿಬಿಡುತ್ತಾರೆ. ಇಲ್ಲಿ ದೇಶದ ಸೇವೆಯ ಪ್ರಶ್ನೆ ಎಲ್ಲಿ ಬಂತು? ಒಂದು ಕಾಲವಿತ್ತು. ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಸಮಾಜದಲ್ಲಿ ಗುರುತಿಸಬಹುದಿತ್ತು. ಇಂದು ಅದು ಪೂರ್ಣ ಪ್ರಮಾಣದಲ್ಲಿ ಮಾಯವಾಗಿದೆ.

ಈಗ ಏನಿದ್ದರೂ ಲಾಭ ನಷ್ಟದ ಲೆಕ್ಕಚ್ಚಾರ. ಅದು ಎಲ್ಲಾ ಇಲಾಖೆಯಲ್ಲೂ ಸರ್ವೇ ಸಾಮಾನ್ಯ. ಏಕೆಂದರೆ ಇಂದು ಕೆಲಸಕ್ಕೆ ಸೇರುವುದರಿಂದ ಹಿಡಿದು ಬೇಕಾದ ಕಡೆ ಕೆಲಸ ಮಾಡಲು ಲಂಚ, ಪ್ರಭಾವ ಬಳಸಿಕೊಂಡು ತಮಗೆ ಆದಾಯ ಮತ್ತು ಅನುಕೂಲ ಇರುವಲ್ಲಿ ಕೆಲಸ ಮಾಡುತ್ತಾರೆ ಹೊರತು ಸರ್ಕಾರ ನೀಡುವ ಜಾಗದಲ್ಲಿ ಸೇವಾ ಮನೋಭಾವನೆಯಿಂದ ಅಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಉತ್ತಮ ವೈದ್ಯಕೀಯ, ಶಿಕ್ಷಣ ಸೇವೆಗಳು ಎಲ್ಲಾ ಸರಕಾರಿ ಸೇವೆಗಳು ಮರೀಚಿಕೆಯಾಗಿದೆ. ಎಲ್ಲರಿಗೂ ನಗರ ಪ್ರದೇಶವೇ ಬೇಕು. ಸರಕಾರಿ ಕೆಲಸ ಮಾಡಲು ಅವರಿಗೆ ಜನಸೇವೆ ಮುಖ್ಯ ಅಲ್ಲ. ಸ್ವಾರ್ಥ ಮುಖ್ಯ ತಮ್ಮ ಅನೂಕೂಲತೆಗೆ ತಕ್ಕಂತೆ ಇವರ ಸೇವೆ.

ಇಂದು ಸೇವೆ ಮಾನವನ ಒಂದು ರೀತಿಯ ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. ಮನುಷ್ಯನ ಸೇವೆ ಎಲ್ಲಿಗೆ ಬಂದಿದೆ ಅಂದರೆ ದೇವರಿಗೂ ಸೇವೆ ಮಾಡುವಷ್ಟ್ಟು ಬೆಳೆದಿದ್ದು ಅನೇಕ ದೇವಾಲಯದ ಮುಂದೆÉ ಇಂದಿನ ಸೇವಾ ಕರ್ತರು ಅಂತ ಬೋರ್ಡ್ಗಳು ರಾರಾಜಿಸುತ್ತಿರುತ್ತವೆÉ. ಅದು ಅಲ್ಲದೇ ದೇವಾಲಯದ ನಿರ್ಮಾಣಕ್ಕೂ ಅದರ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಿದಕ್ಕೆ ಸರಕಾರದಿಂದ ಅನುದಾನ ಒದಗಿಸಿ ಕೊಟ್ಟದ್ದಕ್ಕೆ ಸನ್ಮಾನ ಮಾಡಿಸಿಕೊಳ್ಳುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತದೆ. ಇದನ್ನು ಯಾವ ರೀತಿಯ ಸೇವೆ ಎಂದು ಪರಿಗಣಿಸುವುದು ತಿಳಿಯದು. ಇನ್ನು ಹಣವಂತರಿಗೆ ಸೇವೆ ಎಂಬುದು ಸಮಾಜದಲ್ಲಿ ತಮ್ಮ ಘನತೆ ಹೆಚ್ಚಿಸಿಕೊಳ್ಳುವ ದಾರಿ ಹಾಗೂ ತಮ್ಮ ವ್ಯವಹಾರವನ್ನು ವೃದ್ಧಿಮಾಡಿಕೊಳ್ಳುವ ಮಾರ್ಗ.

ಈಗ ಯಾರನ್ನಾದರು ಯಾವುದಾದರು ಸಮಾರಂಭಕ್ಕೆ ಅತಿಥಿಯಾಗಿ ಕರೆಯಬೇಕಾದರು ಅವರಿಂದ ಎಷ್ಟು ಸಿಗುತ್ತೆ ಅಂತ ನೋಡಿಯೇ ಕರೆಯುವುದು. ಮೊದಲೆಲ್ಲ ಸಮಾರಂಭಕ್ಕೆ ಸಂಬAಧಪಡುವAತಹ ವ್ಯಕ್ತಿಗಳನ್ನೇ ಅತಿಥಿಯಾಗಿ ಕರೆಯುವ ಪರಿಪಾಠವಿತ್ತು. ಈಗ ಅದೆಲ್ಲ ಮಾಯಾವಾಗಿದೆ. ಹೀಗೆ ಸೇವೆ ಇಲ್ಲೂ ಪರಿಗಣನೆಗೆ ಬರುವುದಿಲ್ಲ.

ಕೊನೆ ಹನಿ: ನಮ್ಮ ಹಿರಿಯರು ಹೇಳುತ್ತಿದ್ದರು... ನಾವು ಎಡಕೈಯಲ್ಲಿ ಕೊಟ್ಟದ್ದು ಬಲಕೈಗೆ ಗೊತ್ತಾಗಬಾರದು ಅಂತ. ಈಗ ಅದು ಎಡಕೈಯಲ್ಲಿ ಕೊಟ್ಟರೆ ಬಲಕೈಯಲ್ಲಿ ಸೆಲ್ಫಿ ತೆಗೆದುಕೊಂಡು ವೈರಲ್ ಮಾಡಿ ಎಂದು ಬದಲಾವಣೆಯಾಗಿದೆ.!

- ಬಾಳೆಯಡ ಕಿಶನ್ ಪೂವಯ್ಯ, ಮಡಿಕೇರಿ.