ವೀರಾಜಪೇಟೆ, ಏ. ೨೮: ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪ್ರತಿ ತಿಂಗಳು ಮಾಸಿಕ ಸಭೆ ನಡೆಸುವಂತೆ ಸದಸ್ಯರುಗಳು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಸಿ.ಕೆ ಪೃಥ್ವಿನಾಥ್ ಮಾತನಾಡಿ, ಪುರಸಭೆ ನಿಯಮದ ಪ್ರಕಾರ ಪ್ರತಿ ತಿಂಗಳು ಮಾಸಿಕ ಸಭೆಯನ್ನು ನಡೆಸಬೇಕು. ಕಳೆದ ನಾಲ್ಕು ತಿಂಗಳಿAದ ಒಂದು ಸಭೆಯನ್ನು ನಡೆಸಲಿಲ್ಲ. ೭೦ ಪುಟದ ಸಭಾ ನಡಾವಳಿ ಪ್ರತಿಯನ್ನು ನೀಡಿದರೆ ಯಾವ ರೀತಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಇದೊಂದು ಕಾಟಾಚಾರದ ಸಭೆ ಎಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಸಿ.ಕೆ ಪ್ರಥ್ವಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ ವಿಶೇಷ ಮಾಸಿಕ ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದಾಗ ವಿಶೇಷ ಸಭೆಗೂ ಮಾಸಿಕ ಸಭೆಗೂ ವ್ಯತ್ಯಾಸಗಳಿವೆ. ವಿಶೇಷ ಸಭೆಗಳಲ್ಲಿ ವಾರ್ಡ್ಗಳ ಅಭಿವೃದ್ದಿ ಕಾರ್ಯಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ; ಇನ್ನು ಮುಂದೆಯಾದರೂ ಮಾಸಿಕ ಸಭೆಯನ್ನು ನಡೆಸುವಂತೆ ನೀಡಿದ ಸಲಹೆಯಂತೆ ಸಭೆ ಒಪ್ಪಿಗೆ ಸೂಚಿಸಿತು.

ಪಟ್ಟಣದ ಕೆಲವು ಅಭಿವೃದ್ದಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಶೇ. ೬೦ರಷ್ಟು ಅನುದಾನ ಬರುತ್ತಿದೆ. ಶೇ೩೦ ರಾಜ್ಯ ಸರ್ಕಾರದ ಹಣವಾಗಿದೆ. ಶೇ.೧೦ ಸ್ಥಳೀಯ ಸಂಸ್ಥೆಗಳ ಹಣವಾಗಿದೆ. ಎಲ್ಲಾ ಅನುದಾನವನ್ನು ರಾಜ್ಯ ಸರ್ಕಾರದ ಅನುದಾನ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರುಗಳಾದ ಜೂನ ಮತ್ತು ಮಹದೇವ ಆಕ್ಷೇಪ ವ್ಯಕ್ತ ಪಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳ ನಡುವೆ ಮಾತಿನ ಚಕಮಕಿ ನಡೆದು ಸಭೆ ವಿಕೋಪಕ್ಕೆ ತೆರಳುತ್ತಿರುವುದನ್ನು ಮನಗಂಡ ಅಧ್ಯಕ್ಷರು ಸಭೆಯನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.

ನೆಹರು ನಗರದ ಕೆಲವು ಭಾಗಗಳಲ್ಲಿ ಅರಣ್ಯ ಜಾಗ ಒತ್ತುವರಿಯಾಗಿದ್ದು ಅದರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರ ಮೇಲೆ ಅರಣ್ಯ ಇಲಾಖೆಯಲ್ಲಿ ಪಕ್ರರಣ ದಾಖಲಾಗಿರುವ ಬಗ್ಗೆ ಸದಸ್ಯೆ ಅನಿತಾ ಮಾಹಿತಿ ಬಯಸಿದರು. ಉತ್ತರಿಸಿದ ಅಧ್ಯಕ್ಷರು ಡಿಎಫ್‌ಒ ಕಚೇರಿಯಲ್ಲಿ ಪ್ರಕರಣ ನಡೆಯುತ್ತಿದ್ದು, ಜನರು ವಾಸ ಇರುವ ಜಾಗವನ್ನು ಇಲಾಖೆ ಸ್ವಾದೀನ ಪಡಿಸದೆ ಉಳಿದ ಜಾಗವನ್ನು ಸ್ವಾದೀನ ಪಡಿಸಿಕೊಳ್ಳುವಂತೆಯೂ, ಅಗತ್ಯ ದಾಖಲೆ ಒದಗಿಸದವರಿಗೆ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ವ್ಯವಸ್ಥಾಪಕಿ ಸುಜಾತ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಬೆಟ್ಟಪ್ರದೇಶವಾದ ನೆಹರುನಗರದಲ್ಲಿ ಕಳೆದ ನಾಲ್ಕು ತಿಂಗಳಿAದ ಕುಡಿಯುವ ನೀರಿಗೆ ಹಾಹಾಕಾರ ಬಂದಿದ್ದು, ಪ್ರಸ್ತುತ ಇರುವ ಬೋರ್‌ವೆಲ್‌ಗೆ ಮೋಟಾರು ಅಳವಡಿಕೆಗೆ ಹಲವು ಬಾರಿ ಅರ್ಜಿ, ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ. ನೀರು ಸರಬರಾಜಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇರ್ಫಾನ್ ನಾಲ್ಕು ತಿಂಗಳಿAದ ಮೋಟಾರ್ ಅಳವಡಿಸದೆ ಸತಾಯಿಸುತ್ತಿರುವ ಬಗ್ಗೆ ನೇರವಾಗಿ ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷರು ಕೂಡಲೇ ನೀರಿನ ವ್ಯವಸ್ಥೆ ಕ್ಯೆಗೊಳ್ಳುವ ಭರವಸೆ ನೀಡಿದರು.

ಖಾಸಗಿ ಬಸ್ಸು ನಿಲ್ದಾಣದಲ್ಲಿ ನೆಲಬಾಡಿಗೆಗೆ ಪಡೆದುಕೊಂಡ ಒಬ್ಬರು ಶಾಶ್ವತ ಕಟ್ಟಡವನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಲಿಖಿತ ದೂರು ನೀಡುತ್ತಿರುವುದಾಗಿ ನಾಮನಿರ್ದೇಶಿತ ಸದಸ್ಯ ಶಭರೀಶ್ ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬುಸಮ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಲೀಲ್, ಪೂರ್ಣಿಮಾ, ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಜಲೀಲ್, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಹೆಚ್.ಎಂ ಪೂರ್ಣಿಮಾ ಅವರುಗಳನ್ನು ಆಯ್ಕೆ ಮಾಡಲಾಯಿತು.