ಸೋಮವಾರಪೇಟೆ, ಏ. ೨೮: ಇಲ್ಲಿನ ಸೋಮವಾರಪೇಟೆ ಉಪ ವಿಭಾಗ ವ್ಯಾಪ್ತಿಯ, ಶಾಂತಳ್ಳಿ ಶಾಖೆಗೆ ಒಳಪಟ್ಟ ತೋಳೂರುಶೆಟ್ಟಳ್ಳಿ ಗ್ರಾಮದ ಸ.ನಂ. ೧/೧೦ರಲ್ಲಿ ಒತ್ತುವರಿಯಾಗಿದ್ದ ಒಟ್ಟು ೧೮.೪೦ ಎಕ್ರೆ ಊರುಡುವೆ ಜಾಗವನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಕಳೆದ ಅನೇಕ ವರ್ಷಗಳಿಂದ ಊರುಡುವೆ ಜಾಗವನ್ನು ಪ್ಲಾಂಟೇಷನ್ ಸಂಸ್ಥೆಯೊAದು ಒತ್ತುವರಿ ಮಾಡಿಕೊಂಡು ಕಾಫಿ ಕೃಷಿ ಕೈಗೊಂಡಿರುವುದನ್ನು ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಇದೀಗ ತೆರವು ಮಾಡಿಸಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಿಚಾರಣಾಧಿಕಾರಿಯವರು ಒತ್ತುವರಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಮೇರೆ, ಪ್ಲಾಂಟೇಷನ್ ಸಂಸ್ಥೆಯ ಮಾಲೀಕರು ವಿಚಾರಣೆಗೆ ಹಾಜರಾಗಿದ್ದು, ಜಾಗವನ್ನು ಒತ್ತುವರಿ ಮಾಡಿ ಕೊಂಡಿರುವುದು ಒಪ್ಪಿಕೊಂಡಿದ್ದಾರೆ.

ತೋಳೂರುಶೆಟ್ಟಳ್ಳಿ ಗ್ರಾಮದ ಸ.ನಂ. ೧/೧೦ರ ಒಟ್ಟು ೧೮.೪೦ ಎಕ್ರೆ ಜಾಗವನ್ನು ೧೯೭೦ರಿಂದಲೇ ಒತ್ತುವರಿ ಮಾಡಿ, ಕಾಫಿ ಗಿಡಗಳನ್ನು ನೆಟ್ಟು ಮತ್ತು ಸ್ವಲ್ಪ ಜಾಗವನ್ನು ಹಾಗೆಯೇ ಖಾಲಿ ಬಿಟ್ಟುಕೊಂಡು ಸುಪರ್ಧಿಯಲ್ಲಿ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಲ್ಲದೇ, ಸದ್ರಿ ಒತ್ತುವರಿ ಜಾಗವನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸಿಕೊಡಲು ಸಮ್ಮತಿ ಸೂಚಿಸಿದ ಹಿನ್ನೆಲೆ, ಯಾವುದೇ ತಕರಾರಿಲ್ಲದೇ ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಒಟ್ಟು ೧೮.೪೦ ಎಕ್ರೆ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

ಒತ್ತುವರಿ ಜಾಗದ ಸುತ್ತಲೂ ಹಿಟಾಚಿ ಯಂತ್ರದ ಸಹಾಯದಿಂದ ಜಾನುವಾರು ಕಂದಕ ನಿರ್ಮಿಸಿ, ಒತ್ತುವರಿ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮತ್ತು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯ ನಡೆದಿದ್ದು, ಸೋಮವಾರಪೇಟೆ ವಲಯದ ವಲಯಾರಣ್ಯಾಧಿಕಾರಿ ಎನ್. ಶೈಲೇಂದ್ರಕುಮಾರ್, ಶಾಂತಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಸ್. ಸತೀಶ್, ಅರಣ್ಯ ರಕ್ಷಕರಾದ ವಿಶ್ವಕರಿಮಲ್ಲಪ್ಪನವರ್, ಅರಣ್ಯ ವೀಕ್ಷಕರಾದ ಸುಂದರ,

ನೌಕರ ಲಿಖಿತ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.