ಸಿದ್ದಾಪುರ, ಏ. ೨೮ : ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಅವರೆಗುಂದ ನಿವಾಸಿ ಚಿಣ್ಣಪ್ಪ ಅವರ ನಿವಾಸಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅಲ್ಲದೆ ಸರ್ಕಾರದ ವತಿಯಿಂದ ಮೃತ ಕುಟುಂಬಕ್ಕೆ ನೀಡಬೇಕಾದ ಎರಡನೇ ಬಾರಿಯ ಪರಿಹಾರ ರೂ ೧೦ ಲಕ್ಷದ ಚೆಕ್ಕನ್ನು ಹಸ್ತಾಂತರ ಮಾಡಿದರು. ಈಗಾಗಲೇ ಸರಕಾರದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೂ೫ ಲಕ್ಷದ ಪರಿಹಾರವನ್ನು ನೀಡಿದ್ದು ಒಟ್ಟು ೧೫ಲಕ್ಷವನ್ನು ನೀಡಲಾಗಿದೆ. ಶಾಸಕ ಪೊನ್ನಣ್ಣ ಭೇಟಿ ನೀಡಿದ ಸಂದರ್ಭ ಮೃತ ಚಿಣ್ಣಪ್ಪ ಅವರ ಪುತ್ರ ಗ್ರಾಮ ಪಂಚಾಯಿತಿ ಸದಸ್ಯ ಸುಳ್ಯ ಕೋಡಿ ಜಯಂತ್ ಮಾತನಾಡಿ, ಇಂತಹ ದುರ್ಘಟನೆ ನಡೆಯದ ರೀತಿಯಲ್ಲಿ ಸರ್ಕಾg ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಮನವಿ ಮಾಡಿದರು. ಅಲ್ಲದೆ ಈ ಭಾಗದ ಅರಣ್ಯ ಪ್ರದೇಶದ ಒಳಗೆ ತಲ ತಲಾಂತರಗಳಿAದ ವಾಸ ಮಾಡಿಕೊಂಡಿರುವ ಇತರ ಜನಾಂಗಕ್ಕೆ ಈವರೆಗೂ ಹಕ್ಕುಪತ್ರ ದೊರೆತಿಲ್ಲ. ಇದರಿಂದಾಗಿ ಸರ್ಕಾರದ ಯಾವುದೇ ಸೌಲಭ್ಯಗಳು ತಮಗೆ ಸಿಗುತ್ತಿಲ್ಲ ಎಂದು ಹೇಳಿದರು.
ಸ್ಥಳೀಯ ನಿವಾಸಿಗಳು ಕೂಡ ಹಕ್ಕುಪತ್ರದ ಬಗ್ಗೆ ಮಾಹಿತಿ ನೀಡಿದರು. ಶಾಸಕ ಪೊನ್ನಣ್ಣ ‘ಶಕ್ತಿ’ಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ಹಂತ ಹಂತವಾಗಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಪಾಲಿಬೆಟ್ಟ ಸಮೀಪದ ಮೇಕೂರು ಹೊಸಕೇರಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಕಾರ್ಮಿಕ ಚೆಲ್ಲ ದೊರೆಸ್ವಾಮಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇವರಿಗೆ ಸರಕಾರದ ವತಿಯಿಂದ ತುರ್ತು ಪರಿಹಾರವಾಗಿ ರೂ೫ ಲಕ್ಷವನ್ನು ನೀಡಲಾಗಿದ್ದು ಉಳಿದ ಪರಿಹಾರ ರೂ. ೧೦ ಲಕ್ಷವನ್ನು ನೀಡಲಾಗುವುದು. ಎಂದರು. ಈ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಅಧಿಕಾರಿ ರತನ್ ಕುಮಾರ್. ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳಣಿ ಸ್ವಾಮಿ ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್. ಹಾಗೂ ಇನ್ನಿತರರು ಹಾಜರಿದ್ದರು.
- ವಾಸು