ಮಡಿಕೇರಿ, ಏ, ೨೭: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭರವಸೆಯ ನುಡಿಗಳನ್ನಾಡಿದರು.

ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತ ಮುದ್ದಂಡ ಹಾಕಿ ನಮ್ಮೆಯ ಸಭಾ ಕಾರ್ಯಕ್ರಮವನ್ನು ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತ ಮುದ್ದಂಡ ಹಾಕಿ ನಮ್ಮೆಯ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪುಟ್ಟ ಜಿಲ್ಲೆ ಕೊಡಗು ದೇಶಕ್ಕೆ ಫೀ.ಮಾ. ಕಾರ್ಯಪ್ಪ, ಜ. ತಿಮ್ಮಯ್ಯ ಅವರಂತಹ ಮಹಾನ್ ಸೇನಾನಿ ಗಳನ್ನು, ದೇಶವನ್ನು ಪ್ರತಿನಿಧಿ ಸಲು ಅನೇಕ

(ಮೊದಲ ಪುಟದಿಂದ) ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ. ಕೊಡವ ಸಮುದಾಯ ಕ್ರೀಡೆಯನ್ನು ರಕ್ಷಿಸಿ, ಬೆಳೆಸುತ್ತಿದ್ದು, ದೇಶದ ಎಲ್ಲಿಯೂ ಇಂತಹ ಉದಾಹರಣೆಗಳಿಲ್ಲ. ವರ್ಷದಿಂದ ವರ್ಷಕ್ಕೆ ಹಾಕಿ ನಮ್ಮೆಯಲ್ಲಿ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಾರ್ಹ ವಿಷಯವಾಗಿದೆ. ೪ ಸಾವಿರ ವರ್ಷಗಳ ಇತಿಹಾಸ ಹಾಕಿ ಕ್ರೀಡೆಗಿದ್ದು, ಈಜಿಫ್ಟ್ನಲ್ಲಿ ಆರಂಭವಾದ ಕ್ರೀಡೆ ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಭಾರತದಲ್ಲಿ ಹಾಕಿ ಪ್ರಖ್ಯಾತಿ ಗಳಿಸುವುದರೊಂದಿಗೆ ದೇಶದ ಕೀರ್ತಿ, ಗೌರವ ಹೆಚ್ಚಿಸಿದೆ ಎಂದರು.

‘ಹಾಕಿ ಜೀವಂತವಾಗಿರಲು ಕೊಡವ ಸಮುದಾಯ ಕಾರಣ’

ಹಾಕಿ ಜೀವಂತವಿರಲು, ಈ ಮಟ್ಟದಲ್ಲಿ ಖ್ಯಾತಿ ಗಳಿಸಲು ಕೊಡವ ಸಮುದಾಯ ಕಾರಣವಾಗಿದೆ. ಕೊಡವ ಸಮುದಾಯ ಕೇವಲ ಕ್ರೀಡಾಪಟುಗಳನ್ನು ನೀಡಿಲ್ಲ. ಕ್ರೀಡೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಮಹತ್ಕಾರ್ಯ ಮಾಡುತ್ತಿದೆ ಎಂದು ಜಿ. ಪರಮೇಶ್ವರ್ ಮೆಚ್ಚುಗೆಯ ಮಾತುಗಳನ್ನಾಡಿದರು.

ರಾಜ್ಯ ಸರಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಶೇ ೩ ಮೀಸಲಾತಿ ಈಗಾಗಲೇ ನೀಡಲಾಗಿದೆ. ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಶೇ ೨ ಕ್ರೀಡಾಪಟುಗಳಿಗೆ ಮೀಸಲಿಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿವರ್ಷ ಸರಕಾರ ಹಾಕಿ ನಮ್ಮೆಗೆ ರೂ. ೧ ಕೋಟಿ ಅನುದಾನ ನೀಡುತ್ತಿದ್ದು, ಹೆಚ್ಚಿನ ಅನುದಾನದ ಪ್ರಸ್ತಾವನೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡಲಾಗುವುದು. ಮುಂದಿನ ವರ್ಷದಲ್ಲಿ ಮುಖ್ಯಮಂತ್ರಿ ಹಾಕಿನಮ್ಮೆಗೆ ಬರುತ್ತಾರೆ ಎಂದರು.

ಅದ್ದೂರಿ ಕ್ರೀಡೋತ್ಸವ - ದಿನೇಶ್ ಗುಂಡೂರಾವ್ ಮೆಚ್ಚುಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕೊಡವ ಸಮಾಜಕ್ಕೆ ಹಾಕಿ ಮೇಲಿರುವ ಆಸಕ್ತಿಯಿಂದ ಈ ಕ್ರೀಡಾ ಹಬ್ಬವನ್ನು ಇಷ್ಟೊಂದು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಕೊಡವ ಸಮುದಾಯ ದೇಶ, ಕ್ರೀಡೆಗಾಗಿ ನೀಡಿರುವ ಕೊಡುಗೆ ಬೇರೆ ಯಾವುದೇ ಸಮುದಾಯಗಳು ನೀಡಿಲ್ಲ. ದೇಶಕ್ಕೆ ಕೊಡುಗೆ ನೀಡಿದ ತಲಾ ವಿತ್ತೀಯ ಸಹಕಾರ ಗಮನಿಸಿದರೆ ಕೊಡವರು ಅಗ್ರಸ್ಥಾನದಲ್ಲಿರುತ್ತದೆ. ದೇಶದ ಗಮನ ಸೆಳೆಯುವ, ಸಾಮಾಜಿಕ ಜವಾಬ್ದಾರಿ ಹೊಂದಿರುವ ಜನಾಂಗ ಕೊಡವ ಸಮುದಾಯವಾಗಿದೆ ಎಂದು ಬಣ್ಣಿಸಿದರು.

ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮೊಳ್ಳೆರ ಗಣೇಶ್ ಅವರಿಗೆ ೨೦ ಎಕರೆ ಜಾಗ ನೀಡಿದ ಸಂದರ್ಭ ಗಣೇಶ್ ಅವರು ಜಾಗ ನಿರಾಕರಿಸಿ ಕ್ರೀಡಾ ವಸತಿ ನಿಲಯ ಮಾಡುವಂತೆ ಸಲಹೆ ನೀಡಿದ್ದರು. ಇದರಿಂದ ಬೆಂಗಳೂರಿನಲ್ಲಿ ಕ್ರೀಡಾ ಶಾಲೆ ನಿರ್ಮಾಣವಾಯಿತು ಎಂದು ಸ್ಮರಿಸಿದರು.

ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ನೈಸರ್ಗಿಕ ಸಂಪತ್ತಿನೊAದಿಗೆ ಪ್ರವಾಸಿಗರನ್ನು ಆಕರ್ಷಿಸುವ ಕೊಡಗು ಜಿಲ್ಲೆಯಲ್ಲಿರುವ ಕೊಡವರು ಶೌರ್ಯ, ಧೈರ್ಯ, ದೇಶಾಭಿಮಾನ, ಕ್ರೀಡೆಗೂ ಹೆಸರುವಾಸಿಯಾಗಿದ್ದಾರೆ. ದೇಶದಲ್ಲಿ ಯಾವುದೇ ಕಡೆಗಳಲ್ಲಿ ಈ ಮಟ್ಟದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿಲ್ಲ ಎಂದರು.

ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಕೊಡವರ ಜನಸಂಖ್ಯೆ ಕಡಿಮೆ. ಆದರೆ, ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಸ್ವಾತಂತ್ರö್ಯ ಹೋರಾಟದಿಂದ ಈ ತನಕ ಕೊಡವರ ಸೇವೆಯನ್ನು ಹೊರತುಪಡಿಸಿ ನೆನೆಸಿಕೊಳ್ಳಲು ಸಾಧ್ಯವಿಲ್ಲ. ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ, ಹಾಕಿ ಅಕಾಡೆಮಿಗೆ ಜಾಗ, ಮೈದಾನಗಳ ಉನ್ನತೀಕರಣ ಹೀಗೆ ಜಿಲ್ಲೆಯಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ಸರಕಾರ ಸ್ಪಂದಿಸುತ್ತಿದೆ. ಸಣ್ಣ ಜಿಲ್ಲೆಯಲ್ಲಿರುವ ಸಣ್ಣ ಸಮುದಾಯ ಕೊಡವರ ಮೇಲೆ ಸರಕಾರಕ್ಕೆ ಅಪಾರ ಕಾಳಜಿಯಿದೆ ಎಂದರು.

೨೫ನೇ ವರ್ಷದ ಹಾಕಿನಮ್ಮೆ ಯಶಸ್ವಿಯಾಗಿ ನಡೆದಿದೆ. ೨೦೩೫ ರÀ ತನಕ ಹಾಕಿ ನಮ್ಮೆ ಆಯೋಜನೆಗೆ ಕುಟುಂಬಗಳು ಮುಂದೆ ಬಂದಿವೆ. ಸೂರ್ಯ, ಚಂದ್ರ ಇರುವ ತನಕ ಈ ಹಾಕಿ ನಮ್ಮೆ ಜೀವಂತವಾಗಿರುತ್ತದೆ. ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲೂ ಸ್ಥಾನ ಪಡೆಯುತ್ತದೆ ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿದರು.

ಮುದ್ದಂಡ ಹಾಕಿ ನಮ್ಮೆ ಅಧ್ಯಕ್ಷ ರಶಿನ್ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹಾಕಿ ನಮ್ಮೆ ಮಡಿಕೇರಿಯಲ್ಲಿ ನಡೆಸಿದರೆ ಜನ ಕಡಿಮೆ ಸೇರುತ್ತಾರೆ ಎಂಬ ಮಾತಿತ್ತು. ಇದೀಗ ಆ ಮಾತು ಸುಳ್ಳಾಗಿದೆ. ಪ್ರಾಕೃತಿಕ ವಿಕೋಪ, ಕೊರೊನಾ ಪರಿಸ್ಥಿತಿಯಿಂದ ೨೦೧೮ ರಿಂದ ೨೦೨೨ರ ತನಕ ಪಂದ್ಯಾಟ ನಡೆಸಲು ಸಾಧ್ಯವಾಗಲಿಲ್ಲ. ೨೫ನೇ ವರ್ಷದ ಆಯೋಜನೆ ಮುದ್ದಂಡ ಕುಟುಂಬದ ಪಾಲಿಗೆ ದೊರೆತ್ತಿದ್ದು, ಸೌಭಾಗ್ಯವಾಗಿದೆ. ಹುತ್ತರಿ, ಕೈಲ್‌ಪೊಳ್ದ್, ಕಾವೇರಿ ಸಂಕ್ರಮಣ ಬಳಿಕ ಕೊಡವ ಹಾಕಿ ಉತ್ಸವ ಕೊಡವರ ೪ನೇ ಹಬ್ಬವಾಗಿದೆ. ಜನಾಂಗದ ಅತೀ ದೊಡ್ಡ ಸಮ್ಮಿಲನಕ್ಕೆ ಹಾಕಿ ನಮ್ಮೆ ವೇದಿಕೆಯಾಗಿದೆ. ಈ ಬಾರಿ ಹಾಕಿ ಉತ್ಸವಕ್ಕೆ ೩೯೬ ದಾಖಲೆಯ ತಂಡ ನೋಂದಣಿ ಮಾಡಿ ಸಹಕಾರ ನೀಡಿದೆ. ಹಾಕಿ ಇತಿಹಾಸದಲ್ಲಿ ಮೊದಲ ಬಾರಿಗೆ ಆನ್‌ಲೈನ್ ನೋಂದಣಿಗೆ ಅವಕಾಶ ನೀಡಲಾಗಿತ್ತು. ಮುಂದಿನ ವರ್ಷಗಳಲ್ಲಿ ಮತ್ತಷ್ಟು ತಂಡಗಳು ಭಾಗವಹಿಸಬೇಕು ಎಂದರು.

೨೪ ಕುಟುಂಬಗಳ ಐನ್‌ಮನೆಯಲ್ಲಿ ಕ್ರೀಡಾ ಜ್ಯೋತಿ ಸಂಚರಿಸಿದ್ದು, ೨೬೮ ಕಿ.ಮೀ. ಪೈಕಿ ೧೨೦ ಕಿ.ಮೀ. ಮ್ಯಾರಥನ್ ಓಟಗಾರರು ಕ್ರೀಡಾ ಜ್ಯೋತಿ ಹಿಡಿದು ಓಡಿದ್ದಾರೆ. ಕೊಡವ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಪ್ರಥಮ ಬಾರಿ ೫ಎ ಸೈಡ್ ಮಹಿಳಾ ಹಾಕಿ ಆಯೋಜಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗಿದೆ. ಪ್ರಥಮ ಪ್ರಯತ್ನದಲ್ಲಿ ೫೮ ತಂಡಗಳು ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಾಮಾಜಿಕ ಜವಾಬ್ದಾರಿ ಇರುವ ಹಿನ್ನೆಲೆ ಶೂನ್ಯ ಕಸ ಮಾಡುವ ಉದ್ದೇಶದಿಂದ ಮೈದಾನದಲ್ಲಿ ಸಂಗ್ರಹಗೊAಡ ೧೦ ಟನ್ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡಲಾಗಿದೆ. ಹಸಿಕಸವನ್ನು ವಿಂಗಡಿಸಿ ವಿಲೇವಾರಿ ಮಾಡಿ ಗೊಬ್ಬರ ಮಾಡÀಲು ಕ್ರಮವಹಿಸಲಾಗಿದೆ. ಬೊಡಿನಮ್ಮೆಗೆ ೪೦೦ ಸ್ಪರ್ಧಿಗಳು ಭಾಗವಹಿಸಿದ್ದರು. ಶೂಟಿಂಗ್‌ನಲ್ಲಿ ಸಾಧನೆಗೆ ವೇದಿಕೆ ಕಲ್ಪಿಸಲು ಪೂರಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಯಿತು, ಲಿಮ್ಕಾ, ಗಿನ್ನಿಸ್ ದಾಖಲೆ ಬರೆದಿರುವ ಈ ಹಾಕಿ ನಮ್ಮೆಯಲ್ಲಿ ಕ್ವಾರ್ಟರ್ ಫೈನಲ್‌ನಿಂದ ವೀಡಿಯೋ ರೆಫರಲ್ ಪರಿಚಯ ಮಾಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಸಹಕಾರ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಎಂ.ಬಿ, ದೇವಯ್ಯ, ಪಟ್ಟೇದಾರ ಡಾಲಿ ತಿಮ್ಮಯ್ಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಡೆ ಸೇರಿದಂತೆ ಇನ್ನಿತರರು ಹಾಜರಿದ್ದರು.

ಚೆಟ್ಟಿರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿ, ಮುದ್ದಂಡ ಡೀನ್ ಬೋಪಣ್ಣ ಸ್ವಾಗತಿಸಿ, ಮುದ್ದಂಡ ರಾಯ್ ತಮ್ಮಯ್ಯ ವಂದಿಸಿದರು. ಮಾದೇಟಿರ ಬೆಳ್ಯಪ್ಪ ಹಾಗೂ ಚೋಕೀರ ಅನಿತಾ ನಿರೂಪಿಸಿದರು.