ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ಉತ್ಸವದ ನಡುವೆ ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಕೌಟುಂಬಿಕ ಮಹಿಳಾ ೫ ಎ ಸೈಡ್ ಹಾಕಿ ಪಂದ್ಯಾವಳಿಯ ಚೊಚ್ಚಲ ಪ್ರಶಸ್ತಿಯನ್ನು ಕಂಬೀರAಡ ಕುಟುಂಬ ತನ್ನದಾಗಿಸಿಕೊಂಡಿದೆ. ಕಂಬೀರAಡಕ್ಕೆ ಪ್ರಬಲ ಪೈಪೋಟಿ ನೀಡಿದ್ದ ಕೆಚ್ಚೆಟ್ಟಿರ (ಕಡಗದಾಳು) ತಂಡ ವೀರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವದ ನಡುವೆ ಕೊಡವ ಕುಟುಂಬಗಳ ನಡುವೆ ಮಹಿಳೆಯರಿಗೆ ವಿಶೇಷವಾಗಿ ೫ ಎ ಸೈಡ್ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಮನರಂಜನಾತ್ಮಕವಾಗಿಯೂ, ರೋಚಕ ರೀತಿಯಲ್ಲೂ ಜರುಗುವ ಮೂಲಕ ಯಶಸ್ಸು ಕಂಡಿತು. ೫೮ ಕುಟುಂಬಗಳ ಪಾಲ್ಗೊಳ್ಳುವಿಕೆಯ ಈ ಪಂದ್ಯಾವಳಿ ಮುಂದಿನ ವರ್ಷದಿಂದ ಮತ್ತಷ್ಟು ಜನಪ್ರಿಯವಾಗುವ ಉತ್ತೇಜನಕಾರಿ ಬೆಳವಣಿಗೆ ಕಂಡಿರುವುದು ಗಮನಾರ್ಹವಾಗಿದೆ. ಮಹಿಳೆಯರೂ ಹಾಕಿ ಆಟದಲ್ಲಿ ಪುರುಷರಿಗೇನೂ ಕಡಿಮೆಯಿಲ್ಲ ಎಂಬ ರೀತಿಯ ಆಟ ಪ್ರದರ್ಶಿಸುವ ಮೂಲಕ ಜಿಲ್ಲೆಯಲ್ಲಿ ಮಹಿಳಾ ಹಾಕಿಯೂ ತನ್ನ ಛಾಪು ಮೂಡಿಸಿದಂತಾಗಿದೆ.
ಈ ಪಂದ್ಯಾವಳಿಯ ಫೈನಲ್ ಇಂದು ಕಿಕ್ಕಿರಿದು ನೆರೆದಿದ್ದ ಕ್ರೀಡಾಪ್ರೇಮಿಗಳ ಸಮ್ಮುಖದಲ್ಲಿ ಜರುಗಿತು. ಕಂಬೀರAಡ ಹಾಗೂ ಕೆಚ್ಚೆಟ್ಟಿರ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿದ್ದರಿಂದ ಸಮಬಲದ ಹೋರಾಟ ನಡೆದು ಪ್ರೇಕ್ಷಕರಿಗೆ ರಸದೌತಣ ನೀಡಿತು.
ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ೨-೨ ಗೋಲಿನ ಸಮಬಲ ಸಾಧಿಸಿತು. ಕಂಬೀರAಡ ಈ ಪಂದ್ಯದಲ್ಲಿ ಸುಲಭ ಜಯಸಾಧಿಸಲಿದೆ ಎಂಬ ಮಾತಿತ್ತಾದರೂ ಕೆಚ್ಚೆಟ್ಟಿರ ಆಟಗಾರ್ತಿ ಯರು ಇದನ್ನು ಹುಸಿ ಮಾಡುವ ರೀತಿಯ ಪ್ರದರ್ಶನ ತೋರಿದ್ದು ವಿಶೇಷವಾಗಿತ್ತು.
(ಮೊದಲ ಪುಟದಿಂದ) ಸಮಬಲದ ಕಾರಣ ಟೈಬ್ರೇಕರ್‌ನಲ್ಲಿ ಕಂಬೀರAಡ ಪ್ರಯಾಸದ ಜಯ ಸಾಧಿಸುವದರೊಂದಿಗೆ ಚೊಚ್ಚಲ ಕೌಟುಂಬಿಕ ಮಹಿಳಾ ಹಾಕಿ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರವಾಯಿತು.
ನಿಗದಿತ ಅವಧಿಯಲ್ಲಿ ಕಂಬೀರAಡ ಪರ ಪೊನ್ನಮ್ಮ (೨) ಹಾಗೂ ಕೆಚ್ಚೆಟ್ಟಿರ ಪರ ತೇಜಸ್ವಿ ಹಾಗೂ ಪಾರ್ವತಿ ತಲಾ ಒಂದು ಗೋಲು ಬಾರಿಸಿದರು.
ಪಂದ್ಯಕ್ಕೆ ಚಾಲನೆ : ಮಹಿಳಾ ಹಾಕಿ ಫೈನಲ್‌ಗೆ ರಿಪಬ್ಲಿಕ್ ಕನ್ನಡದ ಚೇರಂಡ ಕಿಶನ್ ಅವರು ಚಾಲನೆ ನೀಡಿದರು. ಇವರೊಂದಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಮುದ್ದಂಡ ರಶಿನ್ ಸುಬ್ಬಯ್ಯ, ಎಂ.ಬಿ. ದೇವಯ್ಯ ಮತ್ತಿತರರು ಜತೆಗಿದ್ದರು. ಚೆಪ್ಪುಡಿರ ಕಾರ್ಯಪ್ಪ, ಚೋಕಿರ ಅನಿತಾ, ಬೊಟ್ಟೋಳಂಡ ಸೌಮ್ಯ ವೀಕ್ಷಕ ವಿವರಣೆ ನೀಡಿದರು. ಮುದ್ದಂಡ ಕುಟುಂಬ, ಕೊಡವ ಹಾಕಿ ಅಕಾಡೆಮಿ ಸಹಕಾರದಲ್ಲಿ ಬೆಂಗಳೂರಿನ ಲೇಕ್‌ಸೈಡ್ ಪ್ಯಾರಡೈಸ್ ಕ್ಲಬ್‌ನ ಯುವಕರು ಈ ಪಂದ್ಯಾವಳಿಯನ್ನು ನಡೆಸಿಕೊಟ್ಟರು. ಪಂದ್ಯದ ತೀರ್ಪುಗಾರರಾಗಿ ಕನ್ನಂಡ ಅರುಣ್ ಹಾಗೂ ಅಮ್ಮುಣಿಚಂಡ ಬೋಪಣ್ಣ ಕಾರ್ಯನಿರ್ವಹಿಸಿದರು.ಮುದ್ದಂಡ ಹಾಕಿ ಪಂದ್ಯಾವಳಿ ಸಂದರ್ಭ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರು ಪಾಲ್ಗೊಂಡು ಹಾಕಿ ಆಟದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ರೋಚಕವಾಗಿ ನಡೆದ ಮಹಿಳಾ ಹಾಕಿ ಫೈನಲ್ ಅನ್ನು ಇವರು ಸಂಪೂರ್ಣವಾಗಿ ವೀಕ್ಷಿಸಿ ಸಂಭ್ರಮಪಟ್ಟರು.