ಸಿದ್ದಾಪುರ, ಏ. ೨೫ : ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟ ಘಟನೆ ಮಾಸುವ ಮುನ್ನವೆ ಅವರೆಗುಂದ ಬಳಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಪ್ರಾಣ ಕಳೆÀದುಕೊಂಡಿದ್ದು, ೧೪ ಗಂಟೆಯ ಅಂತರದಲ್ಲಿ ೨ ಸಾವು ಸಂಭವಿಸಿದೆ. ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿ ಕೃಷಿಕ ಸುಳ್ಯಕೋಡಿ ಚಿಣ್ಣಪ್ಪ (೭೬) ಎಂಬವರೇ ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ಮನೆಯ ಬಳಿ ಶಬ್ದ ಬರುತ್ತಿತು. ಈ ಸಂದರ್ಭದಲ್ಲಿ ತಡರಾತ್ರಿ ಮನೆಯ ಹೊರಗಡೆ ಬಂದು ನೋಡುವಷ್ಟರಲ್ಲಿ ಹಠಾತ್ತನೆ ಕಾಡಾನೆಯೊಂದು ಚಿಣ್ಣಪ್ಪ ಅವರ ಮೇಲೆ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಚಿಣ್ಣಪ್ಪ ಅವರು ಕಿರಿಚಿಕೊಂಡಾಗ ಅವರ ಕುಟುಂಬಸ್ಥರು ಹೊರಗಡೆ ಬರುವಷ್ಟರಲ್ಲಿ ಕಾಡಾನೆ ದಾಳಿಗೈದು ಚಿಣ್ಣಪ್ಪ ಅವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ತಡರಾತ್ರಿ ನಡೆದ ಘಟನೆಯಿಂದಾಗಿ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಯಿತು. ಕೂಡಲೇ ಸ್ಥಳೀಯ ನಿವಾಸಿಗಳು ಎರಡು ಗಂಟೆಗೆ ಆಗಮಿಸಿ, ಕುಟುಂಬಸ್ಥರಿಗೆ ಸಹಕಾರ ನೀಡಿದರು. ಅರಣ್ಯದ ಸಮೀಪದ ಅವರೆಗುಂದ ಹಾಡಿಯ ವ್ಯಾಪ್ತಿಯಲ್ಲಿ ಕಾಡಾನೆಗಳು ದಿನನಿತ್ಯ ಸಂಚರಿಸುತ್ತ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರದಂದು ಪಾಲಿಬೆಟ್ಟ ಸಮೀಪದ ಮೆಕೂರು ಹೊಸಕೇರಿ ಗ್ರಾಮದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಕಾರ್ಮಿಕನ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ಧಾಳಿ ಮಾಡಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ವ್ಯಕ್ತಿ ಕಾಡಾನೆ ದಾಳಿಗೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿದ ಘಟನೆಯಿಂದಾಗಿ ಜನರು ಭಯಭೀತರಾಗಿದ್ದಾರೆ. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮುಂದುವರೆಯುತ್ತಿದ್ದು, ಸರಕಾರ ಶಾಶ್ವತ ಯೋಜನೆಯನ್ನು ರೂಪಿಸದಿದ್ದಲ್ಲಿ ಮತ್ತಷ್ಟು ಮಂದಿ ಕಾಡಾನೆ ದಾಳಿಗೆ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಆತಂಕ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ..

ಸಂಕೇತ್ ಭೇಟಿ : ವಿಚಾರ ತಿಳಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ವೀರಾಜಪೇಟೆಯಿಂದ ಬೆಳಗ್ಗಿನ ಜಾವ ೪ ಗಂಟೆಗೆ ಅವರೆಗುಂದ ಗ್ರಾಮದ ಚಿಣ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ನಂತರ ಕುಟುಂಬಸ್ಥರ ಬಳಿ ಮಾಹಿತಿ ಪಡೆದು ಸಾಂತ್ವನ ಹೇಳಿದರು. ನಂತರ ಕುಟುಂಬಸ್ಥರ ಬಳಿ ಚರ್ಚಿಸಿ ಮೃತ ಚಿಣ್ಣಪ್ಪ ಅವರ ಮೃತದೇಹವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ತರಲಾಯಿತು. ನಂತರ ವೈದ್ಯಾಧಿಕಾರಿಗಳೊಂದಿಗೆ ಸಂಕೇತ್ ಅವರು ಮಾತನಾಡಿ ತುರ್ತಾಗಿ ಮರಣೋತ್ತರ ಪರೀಕ್ಷೆ ನಡೆಸಿಕೊಡುವಂತೆ ಮನವಿ ಮಾಡಿಕೊಂಡರು.

(ಮೊದಲ ಪುಟದಿಂದ) ಇದಕ್ಕೆ ಸ್ಪಂದಿಸಿದ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು. ನಂತರ ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಚಿಣ್ಣಪ್ಪ ಅವರು ತಡರಾತ್ರಿ ಕಾಡಾನೆ ದಾಳಿ ನಡೆಸಿ ಕೊಂದಿರುವ ಘಟನೆಯ ಬಗ್ಗೆ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಮಾಹಿತಿ ನೀಡಲಾಗಿದ್ದು, ಶಾಸಕರು ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ ಎಂದು ಸಂಕೇತ್ ತಿಳಿಸಿದರು. ಅಲ್ಲದೆ ಅರಣ್ಯದ ಅಂಚಿನ ಜನವಸತಿ ಪ್ರದೇಶದಲ್ಲಿ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಚಿಣ್ಣಪ್ಪ ಅವರ ಸಹೋದರ ಪೆಮ್ಮಯ್ಯ ಎಂಬವರು ಕಳೆದ ಮೂರು ವರ್ಷಗಳ ಹಿಂದೆ ಮಾಲ್ದಾರೆಗೆ ಮನೆಗೆ ಸಾಮಗ್ರಿಗಳನ್ನು ತರಲು ಹೋಗಿ ಹಿಂತಿರುಗಿ ಮಧ್ಯಾಹ್ನ ಬರುವ ಸಂದರ್ಭದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಮೃತಪಟ್ಟ ಚಿಣ್ಣಪ್ಪ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ ಎರಡು ಪುತ್ರರು, ಓರ್ವ ಪುತ್ರಿ ಇದ್ದಾರೆ. ಘಟನೆಯ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪೊಲೀಸರು ಕೂಡ ಭೇಟಿ ನೀಡಿ ಘಟನೆಯ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಾಪುರದ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಜಯಂತ್ ಎಂಬವರ ತಂದೆಯಾಗಿರುವ ಚಿಣ್ಣಪ್ಪ ಅವರು ತಡರಾತ್ರಿ ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಿನ್ನಲೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರು ಸಂತಾಪ ಸೂಚಿಸಿದರು. ಮೃತರ ನಿವಾಸಕ್ಕೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಅಂತ್ಯಕ್ರಿಯೆ ಮೃತರ ನಿವಾಸದ ಬಳಿ ಶುಕ್ರವಾರ ನಡೆಯಿತು. - ವರದಿ ವಾಸು