ಸೋಮವಾರಪೇಟೆ,ಏ.೨೫: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿAದ ನೆರವೇರಿತು.

ಗ್ರಾಮದ ಸುಗ್ಗಿ ಬನದಲ್ಲಿ ಸಾಂಪ್ರಾದಾಯಿಕ ಆಚರಣೆಗಳೊಂದಿಗೆ ಗ್ರಾಮ ದೇವತೆ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ತೋಳುನಾಡು ವ್ಯಾಪ್ತಿಗೆ ಒಳಪಡುವ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ, ಕಂಬಳ್ಳಿ, ಊರೊಳಗಿನಕೊಪ್ಪ, ಕರಡಿಕೊಪ್ಪ ಸೇರಿದಂತೆ ಸುತ್ತಮುತ್ತಲ ೧೯ ಗ್ರಾಮಗಳ ಗ್ರಾಮಸ್ಥರು ಒಂದೆಡೆ ಸೇರಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಲೆನಾಡು ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಉತ್ಸವÀವಾಗಿ ಹೆಸರು ಪಡೆದಿರುವ ಸುಗ್ಗಿ ಉತ್ಸವಕ್ಕೆ ಅಕ್ಕಪಕ್ಕದ ಜಿಲ್ಲೆಯವರೂ ಆಗಮಿಸುವದು ವಿಶೇಷ. ಸುಗ್ಗಿಯ ಕೊನೆಯ ದಿನದಂದು ವಿವಿಧೆಡೆ ನೆಲೆಸಿರುವ ಮಂದಿ ಗ್ರಾಮಕ್ಕೆ ಆಗಮಿಸುವದರಿಂದ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ತೋಳೂರುಶೆಟ್ಟಳ್ಳಿ ಗ್ರಾಮದ ನಡುಭಾಗದಲ್ಲಿರುವ ಸುಗ್ಗಿಬನದಲ್ಲಿ ನಿರ್ಮಿಸಿರುವ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು

(ಮೊದಲ ಪುಟದಿಂದ) ಸುಗ್ಗಿ ಕಟ್ಟೆ ಎದುರು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಪುಷ್ಪಗಿರಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ದೇವಾಲಯ ಹಾಗೂ ಮುಳ್ಳಯ್ಯನಗಿರಿಗೆ ತೆರಳಿ ಮಳೆ ಕರೆಯುವ ಪದ್ದತಿಯೊಂದಿಗೆ ಪ್ರಾರಂಭವಾದ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ, ಬೀರೇದೇವರ ಹಬ್ಬ, ಗುಮ್ಮನ ಮರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣ, ಕೊಂಡ ಹಾಯುವದು, ಮೊದಲ ಬೇಟೆ, ಊರು ಸುಗ್ಗಿ, ದೇವರ ಗಂಗಾ ಸ್ನಾನ, ಆವರಣ ಶೃಂಗಾರ, ನೆಂಟರ ಸುಗ್ಗಿ, ಹಗಲು ಸುಗ್ಗಿ, ಹೆದ್ದೇವರ ಸುಗ್ಗಿ ಸಾರು ವಿಧಿವಿಧಾನಗಳೊಂದಿಗೆ ಈ ವರ್ಷದ ತೋಳೂರುಶೆಟ್ಟಳ್ಳಿಯ ಹಗಲು ಸುಗ್ಗಿ ಸಂಭ್ರಮದಿAದ ನಡೆಯಿತು.

ಗ್ರಾಮದ ಸುಗ್ಗಿಕಟ್ಟೆಯ ಆವರಣದಲ್ಲಿ ಸಾಂಪ್ರದಾಯಿಕ ಸುಗ್ಗಿ ಕುಣಿತ ನಡೆಯಿತು. ಇಂದು ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಮಾಡಿ, ಎಡೆ ಸಮರ್ಪಣೆ ನಂತರ ಮೆರವಣಿಗೆ ಮೂಲಕ ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.

ದೇವತಾಕಾರ್ಯದಲ್ಲಿ ಪ್ರಧಾನ ಅರ್ಚಕರಾಗಿ ಊರೊಳಗಿನಕೊಪ್ಪದ ಡಿ.ಎನ್. ಶಿವಕುಮಾರ್, ಊರೊಡೆಯನ ದೇವರ ಅರ್ಚಕರಾಗಿ ದೊಡ್ಡಮನೆಕೊಪ್ಪದ ಡಿ.ಎಂ. ದಿಲೀಪ್, ಮದನೆ ದೇವರ ಅರ್ಚಕರಾಗಿ ಶಿವಕುಮಾರ್, ನಿಶಾಂತ್ ಅವರುಗಳು ಕಳೆದ ೧೫ ದಿನಗಳಿಂದ ವಿಶೇಷ ಶುದ್ಧಿಯೊಂದಿಗೆ, ವಿವಿಧ ಕಟ್ಟುಪಾಡುಗಳಿಗೆ ಒಳಪಟ್ಟು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಶುಕ್ರವಾರದಂದು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಹಣ್ಣುಕಾಯಿ ಹಾಗೂ ಮಡೇ ಉತ್ಸವ ನಡೆಯಿತು. ಗ್ರಾಮಸ್ಥರು ದೇವರಿಗೆ ಎಡೆಯನ್ನಿರಿಸಿ ಪೂಜೆ ಸಲ್ಲಿಸಿದರು. ಊರಿಗೆ ಸಮಯಕ್ಕೆ ಸರಿಯಾಗಿ ಮಳೆ ಸುರಿದು ಉತ್ತಮ ಬೆಳೆ ಬೆಳೆಯಲಿ, ಜನ ಮತ್ತು ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವ ಸಂದರ್ಭ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಈಡುಗಾಯಿ ಸೇವೆ ಸಲ್ಲಿಸಿದರು.

ಸುಗ್ಗಿ ಹಬ್ಬದ ಉಸ್ತುವಾರಿಯನ್ನು ಸಮಿತಿಯ ಅಧ್ಯಕ್ಷ ಡಿ.ಎನ್. ರಾಜಗೋಪಾಲ್, ಕಾರ್ಯದರ್ಶಿ ಹೆಚ್.ಜೆ. ಮಹೇಶ್, ಖಜಾಂಚಿ ಎಂ.ಈ. ಕೃಷ್ಣಪ್ಪ, ಜಗದೀಶ್, ಕುಶಾಲಪ್ಪ, ಟಿ.ಕೆ. ಮಾಚಯ್ಯ, ವಿ.ವಿ. ಸೋಮಯ್ಯ, ಬಿ.ಎನ್. ಕುಮಾರ್ ಸೇರಿದಂತೆ ಶ್ರೀ ಸಬ್ಬಮ್ಮ ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು ವಹಿಸಿದ್ದರು.

ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಆರ್‌ಎಂಸಿ ಮಾಜಿ ಅಧ್ಯಕ್ಷ ಬಿ.ಬಿ. ಸತೀಶ್, ಗೌಡಳ್ಳಿ ಗ್ರಾ.ಪಂ. ಸದಸ್ಯ ನವೀನ್ ಅಜ್ಜಳ್ಳಿ ಸೇರಿದಂತೆ ಇತರ ಪ್ರಮುಖರು, ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಭಕ್ತಾದಿಗಳು ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು. -ವಿಜಯ್