ಮಡಿಕೇರಿ, ಏ. ೨೪: ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಜೋಡುಪಾಲದಲ್ಲಿ ಗಾಜುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ಅಪಘಾತವಾದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ.

ಮೈಸೂರಿನಿಂದ ಗಾಜು ಹೊತ್ತು ಪುತ್ತೂರಿಗೆ ಸಾಗುತ್ತಿದ್ದ ಲಾರಿ ಜೋಡುಪಾಲ ಬಳಿ ಬರುವ ಸಂದರ್ಭ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿಯಾಗಿದೆ. ಪರಿಣಾಮ ಮಂಗಳೂರಿನಿAದ ಮೈಸೂರಿಗೆ ತೆರಳುತ್ತಿದ್ದ ಮೈಸೂರಿನ ನಿವಾಸಿ ಮಕ್ಸೂದ್ ಖಾನ್ ಎಂಬವರಿಗೆ ಸೇರಿದ ಕಾರಿನ ಮೇಲೆ ಗಾಜುಗಳು ಬಿದ್ದಿವೆ. ಇದರಿಂದ ಕಾರು ನಜ್ಜುಗುಜ್ಜಾಗಿದ್ದು, ಲಾರಿಯ ಹಿಂಬದಿಯಲ್ಲಿದ್ದ ಕಾರ್ಮಿಕರಾದ ಮೂಲತಃ ಬಿಹಾರ್‌ನ ಗಂಗಾರಾವ್ ಹಾಗೂ ರಾಹುಲ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಗಾಜಿನ ನಡುವೆ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ತಕ್ಷಣ ಸ್ಥಳೀಯರು ಮೇಲೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ.

ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಏರ್ಪಟ್ಟು ಸಮಸ್ಯೆಯಾಯಿತು. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದೆ.