ಮಡಿಕೇರಿ, ಏ. ೨೪: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಕೊಡಗು ಜಿಲ್ಲಾ ಘಟಕ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಪ್ರತಿಭಟಿಸಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ನಗರದ ಮಾರುಕಟ್ಟೆ ಬಳಿ ಸೇರಿದ ಎಸ್.ಡಿ.ಪಿ.ಐ. ಕಾರ್ಯಕರ್ತರು ಮೊಂಬತ್ತಿ ಬೆಳಗಿ ಮೃತರಿಗೆ ಸಂತಾಪ ಸೂಚಿಸಿದರು.

ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ದೇಶದಲ್ಲಿರುವ ಭಾರತೀಯ ಯೋಧರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತ್ತಗೊಳ್ಳಬೇಕೆಂದು ಒತ್ತಾಯಿಸಿದರು.

ಭಾವೈಕ್ಯತೆ ಪರಂಪರೆ ಹೊಂದಿರುವ ಸುಭದ್ರ ಭಾರತದಲ್ಲಿ ಅಸುರಕ್ಷಿತ ಪರಿಸ್ಥಿತಿಯನ್ನು ಸೃಷ್ಟಿಸುವ ಸಂಚು ನಡೆಯುತ್ತಿದೆ. ಭಯೋತ್ಪಾದನೆಗೆ ಜಾತಿ, ಧರ್ಮವಿಲ್ಲ. ಭಯೋತ್ಪಾದನೆಯೇ ಪ್ರತ್ಯೇಕ ಧರ್ಮವಾಗಿದೆ. ಜನರ ಧರ್ಮವನ್ನು ಕೇಳಿ ಕೊಂದಿರುವುದು ಖಂಡನೀಯ. ಪುಲ್ವಾಮಾ ನಂತರ ಈ ದಾಳಿ ನಡೆದಿರುವುದು ಶೋಚನೀಯ. ಕೇಂದ್ರ ಸರಕಾರ ಗಡಿಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ಲಕ್ಷಕ್ಕೂ ಹೆಚ್ಚು ಸೈನಿಕರ ಕೊರತೆ ದೇಶದಲ್ಲಿದೆ. ನೇಪಾಳ, ಚೀನಾ, ಬಾಂಗ್ಲಾ ದೇಶಗಳು ಭಾರತ ಗಡಿಯನ್ನು ಅತಿಕ್ರಮಿಸಿವೆ. ಈ ದೇಶಗಳ ಬಗ್ಗೆ ಕನಿಕರ ತೋರಬಾರದು. ಪಾಕಿಸ್ತಾನಕ್ಕೆ ಯಾವುದೇ ಸಹಕಾರ ನೀಡಬಾರದು ಎಂದು ಒತ್ತಾಯಿಸಿದ ಅವರು, ದೇಶದ ಭದ್ರತೆಗಾಗಿ ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಸರಕಾರ ಮಾಡಬೇಕೆಂದರು.

ಮುಖಂಡ ಅಬ್ದುಲ್ ಅಡ್ಕಾರ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಅಲಿ, ಕಾರ್ಯದರ್ಶಿ ಬಷೀರ್, ನಗರಾಧ್ಯಕ್ಷ ರಿಜ್ವಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.