ಮಡಿಕೇರಿ ನಗರ ಬಿಜೆಪಿ ಅಸಮಾಧಾನ
ಮಡಿಕೇರಿ, ಏ. ೨೩ : ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯವಾಗಿದ್ದು, ದೇಶದ್ರೋಹಿಗಳನ್ನು ಮಟ್ಟ ಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಮಡಿಕೇರಿ ನಗರ ಮಂಡಲ ಬಿಜೆಪಿ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಅವರು, ಪ್ರವಾಸಿಗರನ್ನು ಹತ್ಯೆ ಮಾಡಿ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರನ್ನು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಾಶ ಮಾಡಲಿದೆ ಎಂದು ತಿಳಿಸಿದ್ದಾರೆ. ಎಬಿವಿಪಿ ಖಂಡನೆ
ಮಡಿಕೇರಿ : ಜಮ್ಮು ಕಾಶ್ಮೀರದ ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆAಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುತ್ತದೆ. ಆದರೂ ಸಹ ಅಲ್ಲಿನ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಮಾರುಕಟ್ಟೆಗಳಲ್ಲಿ ದಾಳಿಗಳು ಹಾಗೂ ಇಂದು ನಡೆದಿರುವ ಪ್ರವಾಸಿಗರ ಮೇಲಿನ ದಾಳಿ ಗಮನಿಸುವುದಾದರೆ ಕಾಶ್ಮೀರದ ಶಾಂತಿ ಮತ್ತು ಭಾರತದೊಂದಿಗಿನ ಏಕತೆಗೆ ಉಗ್ರರು ಅರ್ಥಾತ್ ಪ್ರತ್ಯೇಕವಾದಿಗಳು ತೀವ್ರ ಸವಾಲುವೂಡ್ಡುತ್ತಿರುವುದು ಕಳವಳಕಾರಿಯದ ಸಂಗತಿಯಾಗಿದೆ ಎಂದಿದೆ.
ಇಂತಹ ದಾಳಿಗಳನ್ನು ಸಹಿಸಲು ಅಸಾಧ್ಯ ಹಾಗೂ ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆಯೊಂದಿಗೆ ಭಯೋತ್ಪಾದನೆಯನ್ನು ಮೂಲದಿಂದ ಕಿತ್ತೊಗೆಯಲು ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಸಂತೋಷ್ ಆಗ್ರಹಿಸಿದ್ದಾರೆ. ಮಾಜಿ ಯೋಧರ ಒಕ್ಕೂಟ ಖಂಡನೆ
ಮಡಿಕೇರಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಮಾಜಿ ಯೋಧರ ಒಕ್ಕೂಟ, ಅರೆಸೇನಾ ಪಡೆ ಜಿಲ್ಲಾಘಟಕ ಸಂಚಾಲಕ ನೂರೇರ ಭೀಮಯ್ಯ ಖಂಡಿಸಿದ್ದಾರೆ. ದಾಳಿಯ ಹೊಣೆಗಾರರ ತಂಡವನ್ನು ಆದಷ್ಟು ಶೀಘ್ರವಾಗಿ ಹುಡುಕಿ ಹೊಡೆದುರುಳಿಸಿ ಮೃತರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಆಗ್ರಹಿಸಿದೆ.
ಯುವ ಸೇನೆ ಖಂಡನೆ
ಮಡಿಕೇರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್‌ನಲ್ಲಿ ಪ್ರವಾಸಿಗಳ ಮೇಲೆ ದಾಳಿಯನ್ನು ಕೊಡಗು ಯುವ ಸೇನೆ ಖಂಡಿಸಿದೆ. ಕೇವಲ ಧರ್ಮವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ. ಒಕ್ಕಲಿಗರ ಸಂಘ ಖಂಡನೆ
ಮಡಿಕೇರಿ : ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಮಡಿಕೇರಿ ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಮತ್ತು ಭಯೋತ್ಪಾದಕರ ದಾಳಿಯಿಂದ ಅಸುನೀಗಿದ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತದೆ ಎಂದು ಸಂಘದ ತಾಲೂಕು ಅಧ್ಯಕ್ಷ ವಿ.ಜಿ. ಮೋಹನ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಮ್ಮು ಕಾಶ್ಮೀರದಲ್ಲಿ ಮತ್ತೆ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಪಾಕ್ ಬೆಂಬಲಿತ ಭಯೋತ್ಪಾದಕರ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಸೋಮವಾರಪೇಟೆ ಮಂಡಲ ಬಿಜೆಪಿ
ಸುಂಟಿಕೊಪ್ಪ : ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರು ನಡೆಸಿರುವ ನರಮೇಧ ಪ್ರಕರಣವನ್ನು ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ಖಂಡಿಸಿದ್ದಾರೆ.
ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರರ ಹೇಯ ಕೃತ್ಯ ಖಂಡನೀಯ.
"ಸಂವಿಧಾನದ ೩೭೦ನೇ ವಿಧಿ ರದ್ದತಿ, ಶಾಂತಿಯುತ ವಿಧಾನಸಭಾ ಚುನಾವಣೆ, ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರ, ಹೊಸ ಮೂಲಭೂತ ಸೌಕರ್ಯಗಳು ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿಯ ಆಶಾಕಿರಣ ಮೂಡಿತ್ತು. ಇದರಿಂದ ಹತಾಶಗೊಂಡ ಉಗ್ರರು ಹಾಗೂ ಅವರ ಪಾಕ್ ಆಶ್ರಯದಾತರು. ಈ ರಣಹೇಡಿ ಕೃತ್ಯದ ಮೂಲಕ ಸಮಸ್ತ ಭಾರತೀಯರನ್ನು ಕೆಣಕಿದ್ದಾರೆ. ಇದು ಅವರ ಅಂತ್ಯದ ಆರಂಭ ಎಂದು ಗೌತಮ್ ಗೌಡ ತಿಳಿಸಿದ್ದಾರೆ.