*ಗೋಣಿಕೊಪ್ಪ, ಏ. ೧೭: ಜಿಸಿಎಲ್ ಐದನೇ ಆವೃತ್ತಿಯ ಭಗತ್ ಸಿಂಗ್ ಕ್ರಿಕೆಟ್ ಕಪ್‌ನಲ್ಲಿ ಕುಟ್ಟ ವಿದ್ಯಾ ಕ್ರಿಕೆಟರ್ಸ್ ಪಡೆದುಕೊಂಡಿತು.
ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗತ್‌ಸಿಂಗ್ ಯುವಕ ಸಂಘ ಆಯೋಜಿಸಿದ್ದ ನಾಲ್ಕು ದಿನಗಳ ಇಪ್ಪತ್ತು ತಂಡಗಳ ಭಾಗವಹಿಸಿದ್ದ ಪಂದ್ಯಾಟದಲ್ಲಿ ಕುಟ್ಟ ವಿದ್ಯಾ ಕ್ರಿಕೆರ‍್ಸ್ ತಂಡ ಗೊಣಿಕೊಪ್ಪದ ಬೇರ್ಗಿ ಕ್ರಿಕೆಟ್ ತಂಡದ ವಿರುದ್ಧ ಜಯಗಳಿಸಿತು. ಅಂತಿಮ ಹಣಾಹಣಿಯಲ್ಲಿ ವರುಣನ ಆರ್ಭಟಕ್ಕೆ ಮೈದಾನ ಜಲಾವೃತಗೂಂಡು ಫೈನಲ್ ಪಂದ್ಯಾಟವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆಯೋಜಕರ ಮನವಿಯಂತೆ ತಂಡಗಳು ಬಾಲ್ ಟು ವಿಕೆಟ್‌ನಲ್ಲಿ ಭಾಗವಹಿಸಿ ಭಗತ್‌ಸಿಂಗ್ ಕ್ರಿಕೆಟ್ ಕಪ್‌ಗೆ ಸ್ಪರ್ಧೆ ನಡೆಸಿದವು.
ವಿಜೇತ ತಂಡವಾಗಿ ವಿದ್ಯಾ ಕ್ರಿಕೆಟರ್ಸ್, ಬೇರ್ಗಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನವನ್ನು ರಾಯಲ್ ಕ್ರಿಕೆಟರ್ಸ್ ತೃತೀಯ ಸ್ಥಾನವನ್ನು ಮತ್ತು ಪ್ರೊಟೆಕ್ ಕ್ರಿಕೆಟರ್ಸ್ ಚತುರ್ಥ ಸ್ಥಾನವನ್ನು ಪಡೆದು ತಲಾ ೪೧೪೭೨ ರೂಪಾಯಿಗಳ ನಗದನ್ನು ಪಡೆದುಕೊಂಡವು.
ಫೈನಲ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಆರೋಗ್ಯ ಪೂರ್ಣ ಬದುಕಿಗೆ ಕ್ರೀಡೆಗಳು ಸಹಕಾರಿಯಾಗಬಲ್ಲದು. ಪ್ರಧಾನ ಮಂತ್ರಿಗಳು ಮನ್ ಕೀ ಬಾತ್‌ನಲ್ಲಿ ಬೊಜ್ಜು ಕರಗಿಸುವ ವಿಚಾರವಾಗಿ ಮಾತನಾಡಿ ದೇಶದ ಜನರ ಆರೋಗ್ಯದ ಕಾಳಜಿಯ ಬಗ್ಗೆ ಗಮನ ಸೆಳೆದರು. ಈ ವಿಚಾರಕ್ಕೆ ಮುಂದುವರಿದ ಚಿಂತನೆಯಾಗಿ ಯುವಕರ ಆರೋಗ್ಯ ಪೂರ್ಣ ಬದುಕಿಗೆ ಪೂರಕವಾಗುವ ಕ್ರೀಡಾಕೂಟಗಳಿಗೆ ಸ್ಥಳೀಯ ಮಟ್ಟದ ಅನುದಾನವನ್ನು ಒದಗಿಸಲು ಸರ್ಕಾರ ಗಮನ ಹರಿಸಬೇಕೆಂದು ಹೇಳಿದರು.
ಸಂಘದ ಉಪಾಧ್ಯಕ್ಷ ವೇಣುಕಣ್ಣನ್ ಮುಂದಾಳತ್ವದಲ್ಲಿ ನಡೆದ ಕ್ರಿಕೆಟ್ ಉತ್ಸವದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಸತೀಶ್ ಸಿಂಗಿ, ದಾನಿಗಳಾದ ಉಂಭಾಯಿ, ಗಂಗಾಧರ್, ಜೀವನ್‌ಗೌಡ, ಜಿತನ್‌ಗೌಡ, ಸುಭಾಷ್, ಪ್ರಾಯೋಜಕರಾದ ಶರ್ಫುದ್ದೀನ್, ಕಾರ್ತಿಕ್, ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸೋಮಯ್ಯ, ಪ್ರಮುಖರಾದ ಮನೆಯಪಂಡ ಶೀಲಾ ಬೋಪಣ್ಣ, ಪ್ರೀತು ರೈ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.