ಮಡಿಕೇರಿ, ಏ. ೧೪: ರಾಜ್ಯ ಹಾಗೂ ಲೋಕಸಭೆಯಲ್ಲಿ ಮಂಡನೆಗೊAಡು ಅನುಮೋದನೆ ಪಡೆದ ವಕ್ಫ್ ಮಸೂದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ತಾ. ೧೬ ರಂದು (ನಾಳೆ) ಸುನ್ನಿ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಉಪಾಧ್ಯಕ್ಷ ಕೆ.ಎ. ಯಾಕೂಬ್, ಕೇಂದ್ರ ಸರಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ತಾ. ೧೬ ರ ಬೆಳಿಗ್ಗೆ ೧೦ ಗಂಟೆಗೆ ಫೀ.ಮಾ. ಕಾರ್ಯಪ್ಪ (ಸುದರ್ಶನ) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ಆನಂತರ ಜಿಲ್ಲಾಡಳಿತ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸ್ವಾತಂತ್ರö್ಯ ಪೂರ್ವದಲ್ಲಿ ರಾಜರು, ಬ್ರಿಟಿಷರು ಹಾಗೂ ದಾನಿಗಳಿಂದ ದಾನವಾಗಿ ಜಾಗವನ್ನು ನೀಡಿದ್ದಾರೆ. ಇದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಸೀದಿ, ಈದ್ಗಾ, ಖಬರಸ್ಥಾನ, ಶಿಕ್ಷಣ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ರಾಜಕೀಯ ದುರುದ್ದೇಶದಿಂದ ಈ ಮಸೂದೆಯನ್ನು ಸರಕಾರ ಮಂಡಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಉಪಾಧ್ಯಕ್ಷ ಪಿ.ಎಂ. ಅಬ್ದುಲ್ ಲತೀಫ್ ಮಾತನಾಡಿ, ಈ ಹಿಂದೆ ಮೂರು ಬಾರಿ ವಕ್ಫ್ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಅದಕ್ಕೆ ಸಮುದಾಯ ಬೆಂಬಲ ನೀಡಿತ್ತು. ಆದರೆ, ಈ ಬಾರಿ ಮಾಡಿದ ತಿದ್ದುಪಡಿ ಸರಿಯಿಲ್ಲ. ದಾನವಾಗಿ ನೀಡಿದ ಜಾಗವನ್ನು ಭವಿಷ್ಯದಲ್ಲಿ ಹಿಂಪಡೆಯುವ ಯಾವುದೇ ಅಧಿಕಾರವಿರಲಿಲ್ಲ. ಈ ಮಸೂದೆಯಿಂದ ಜಾಗಗಳು ಕೈತಪ್ಪುವ ಸಾಧ್ಯತೆ ಇದೆ. ಸರ್ವಪಕ್ಷಗಳ ಸಮಿತಿ ತಿರಸ್ಕರಿಸಿದ್ದ ಅಂಶಗಳನ್ನು ಸೇರಿಸಿ ಮಸೂದೆ ಮಂಡನೆ ಮಾಡಲಾಗಿದೆ ಎಂದು ಆರೋಪಿಸಿದರು.

ಮಾಧ್ಯಮ ಸಂಚಾಲಕ ಸಿ.ಎಂ. ಹಮೀದ್ ಮುಸ್ಲಿಯಾರ್ ಮಾತನಾಡಿ, ಈ ಮಸೂದೆ ಜಾರಿ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಕಾನೂನು, ಸಂವಿಧಾನ ಬಾಹಿರವಾಗಿ ಈ ಮಸೂದೆ ಮಂಡಿಸಲಾಗಿದೆ. ಮಸೂದೆಯಲ್ಲಿ ಶಿಕ್ಷಣಕ್ಕೆ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಉಲ್ಲೇಖವಿದೆ. ಕೇಂದ್ರ ಸರಕಾರ ಈಗಾಗಲೇ ಇರುವ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಕಾರ್ಯಕ್ರಮವನ್ನು ಕಡಿತ ಮಾಡಿದೆ. ವಕ್ಫ್ ಆಸ್ತಿ ಮೂಲಕ ಬರುವ ಆದಾಯವನ್ನು ಸಮುದಾಯ ಶ್ರೇಯೋಭಿವೃದ್ಧಿ ನೀಡುತ್ತದೆ ಎಂದು ನಂಬಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ತಾ. ೧೬ ರಂದು ಕೈಗೊಂಡಿರುವ ಪ್ರತಿಭಟನೆ ಶಾಂತಿಯುತ ಹಾಗೂ ಶಿಸ್ತು ಬದ್ಧವಾಗಿ ನಡೆಯುತ್ತದೆ. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ಮೆರವಣಿಗೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಧ್ವಜವನ್ನು ಹಿಡಿಯುವಂತಿಲ್ಲ. ಸಮಿತಿ ಸೂಚಿಸುವ ಘೋಷಣೆ ಹೊರತುಪಡಿಸಿ ಬೇರೆ ಘೋಷಣೆಗಳನ್ನು ಕೂಗುವಂತಿಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿಗಳಾದ ಉಮ್ಮರ್ ಫೈಝಿ, ಹಫೀಲ್ ಸಹದಿ, ಕೋಶಾಧಿಕಾರಿ ಮೊಹಮ್ಮದ್ ಹಾಜಿ ಹಾಜರಿದ್ದರು.