ಮಡಿಕೇರಿ, ಏ. ೧೪: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ತಾ. ೧೭ ಹಾಗೂ ೧೮ ರಂದು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸ ಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಸಿ. ಅರುಣ್ ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೭ ರಂದು ಮಡಿಕೇರಿ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಪಂದ್ಯಾವಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕೆ ಒಟ್ಟು ೬೦೦ ಮಂದಿ ಸೇರುವ ನಿರೀಕ್ಷೆ ಇದೆ. ಕ್ರೀಡಾಕೂಟದಲ್ಲಿ ವಿಜೇತರಾದವರು ರಾಜ್ಯಮಟ್ಟದಲ್ಲಿ ಆಟವಾಡಲು ಅರ್ಹರಾಗುತ್ತಾರೆ. ಫುಟ್ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್, ಶಟಲ್, ಕೇರಂ, ಬ್ಯಾಡ್ಮಿಂಟನ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಚೆಸ್, ಟೆೆನ್ನಿಕಾಯ್, ಥ್ರೋಬಾಲ್, ಯೋಗ, ಖೋಖೋ, ವಿವಿಧ ವಿಭಾಗಗಳಲ್ಲಿ ಈಜು ಸ್ಪರ್ಧೆಗಳು, ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ತಾ. ೧೮ ರಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಕರ್ನಾಟಕ ಸಂಗೀತ, ಹಿಂದೂಸ್ತಾನಿ, ಪಾಶ್ಚತ್ಯ ಸಂಗೀತ, ಜಾನಪದ ಸೇರಿದಂತೆ ಇನ್ನಿತರ ಸಂಗೀತ ಸ್ಪರ್ಧೆಗಳು, ಕ್ಲಾಸಿಕಲ್, ಜಾನಪದ ನೃತ್ಯ, ನಾಟಕ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಘದ ಖಜಾಂಜಿ ಪಿ.ಡಿ. ರಾಜೇಶ್, ಕಾರ್ಯದರ್ಶಿ ಪಿ.ಜಿ. ತ್ರಿಶೂಲ್, ಉಪಾಧ್ಯಕ್ಷ ಕೆ.ಬಿ. ಪ್ರಕಾಶ್, ರಾಜ್ಯ ಪರಿಷತ್ ಸದಸ್ಯ ಪಿ.ಎಂ. ಬಾಬು ಹಾಜರಿದ್ದರು.