ಬೆಂಗಳೂರು, ಏ. ೧೨: ರಾಜ್ಯದಲ್ಲಿ ಬಿಯರ್ ಮೇಲೆ ವಿಧಿಸಲಾಗಿರುವ ತೆರಿಗೆ ಹೆಚ್ಚಳದಿಂದ ಮಾರಾಟದ ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಗಿದ್ದು ಬ್ರೂವರೀಸ್ಗಳಲ್ಲಿ ೫,೦೦೦ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಬಿಯರ್ ಉದ್ಯಮವು ರಾಜ್ಯ ಸರ್ಕಾರದ ಗಮನ ಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಆಗಾಗ್ಗೆ ತೆರಿಗೆ ಹೆಚ್ಚಳವು ಬಿಯರ್ ಉದ್ಯಮದ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಮತ್ತು ತೆರಿಗೆ ಆದಾಯವನ್ನು ಸಹ ಕಡಿಮೆ ಮಾಡಿದೆ ಎಂದು ಭಾರತೀಯ ಬ್ರೂವರ್ಸ್ ಸಂಘ (ಬಿಎಐ) ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.
ಕಳೆದ ೧೮ ತಿಂಗಳಲ್ಲಿ ಬಿಯರ್ ಮೇಲಿನ ತೆರಿಗೆಗಳನ್ನು ಮೂರು ಬಾರಿ ಹೆಚ್ಚಿಸಲಾಗಿದ್ದು ಜುಲೈ ೨೦೨೩, ಫೆಬ್ರವರಿ ೨೦೨೪ ಮತ್ತು ಜನವರಿ ೨೦೨೫ ರಲ್ಲಿ ಹೆಚ್ಚಿಸಿದ್ದು, ಪರಿಣಾಮವಾಗಿ, ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿನ ಬೆಳವಣಿಗೆ "ನಿಶ್ಚಲತೆಗೆ ಕುಸಿದಿದೆ" ಎಂದು ಅದು ಹೇಳಿದೆ.
"ಜನವರಿ ೨೦೨೫ ರಲ್ಲಿ ಮೂರನೇ ತೆರಿಗೆ ಹೆಚ್ಚಳದ ನಂತರ, ಬಿಯರ್ ಮಾರಾಟವು ವಾಸ್ತವವಾಗಿ ಮೊದಲ ಬಾರಿಗೆ ಕುಗ್ಗಲು ಪ್ರಾರಂಭಿಸಿದೆ" ಎಂದು ಬಿಎಐ ಮಹಾನಿರ್ದೇಶಕ ವಿನೋದ್ ಗಿರಿ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಬಿಎಐ ಭಾರತದ ಅತಿದೊಡ್ಡ ಬಿಯರ್ ತಯಾರಕರನ್ನು ಪ್ರತಿನಿಧಿಸುವ ಬಿಯರ್ ಉದ್ಯಮದ ಅತ್ಯುನ್ನತ ಸಂಸ್ಥೆಯಾಗಿದೆ. "ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ತೆರಿಗೆ ಹೆಚ್ಚಳವು ಬಿಯರ್ ಉದ್ಯಮದ ಬೆಳವಣಿಗೆಯನ್ನು ಕಸಿದುಕೊಂಡಿದೆ, ರಾಜ್ಯದಲ್ಲಿ ಉದ್ಯಮವು ಮಾಡಿದ ಬೃಹತ್ ಹೂಡಿಕೆಗಳನ್ನು ಅಪಾಯಕ್ಕೆ ಸಿಲುಕಿಸಿದೆ ಮತ್ತು ಸರ್ಕಾರದ ತೆರಿಗೆ ಆದಾಯವನ್ನು ಸಹ ಕಡಿಮೆ ಮಾಡಿದೆ ಎಂದು ನಾವು ಗಮನಸೆಳೆಯುತ್ತೇವೆ" ಎಂದು ಅದು ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಕರ್ನಾಟಕವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. ೧೮೫ ರಿಂದ ಶೇ. ೧೯೫ಕ್ಕೆ ಹೆಚ್ಚಿಸಿತು. ನಂತರ ಜನವರಿ ೨೦೨೫ ರಲ್ಲಿ, ರಾಜ್ಯದಲ್ಲಿ ಮಾರಾಟವಾಗುವ ಹೆಚ್ಚಿನ ಬಿಯರ್ಗಳ ಮೇಲೆ ಅಬಕಾರಿ ಸುಂಕವನ್ನು ಬಲ್ಕ್ ಲೀಟರ್ಗೆ ರೂ. ೧೦ ನ್ನು ಹೆಚ್ಚಿಸಲಾಯಿತು.
ಬಿಯರ್ ಉದ್ಯಮವು ೨೦೨೩-೨೪ರಲ್ಲಿ ಕರ್ನಾಟಕದ ತೆರಿಗೆ ಆದಾಯಕ್ಕೆ ೫,೫೦೦ ಕೋಟಿ ರೂ.ಗಳಿಗೂ ಹೆಚ್ಚು ಕೊಡುಗೆ ನೀಡಿದೆ. ರಾಜ್ಯದಲ್ಲಿ ಮದ್ಯದ ಪಾನೀಯಗಳ ಮಾರಾಟದಲ್ಲಿ ಕೇವಲ ಬಿಯರ್ ಪಾಲು ೮ ಪ್ರತಿಶತದಷ್ಟಿದೆ. ಆದರೆ ಒಟ್ಟು ಮದ್ಯ ಮಾರಾಟ ತೆರಿಗೆಯಲ್ಲಿ ಬಿಯರ್ನ ಪಾಲು ೧೬ ಪ್ರತಿಶತದಷ್ಟಿದೆ. "ಇದಲ್ಲದೆ, ಈ ಪಾಲು ಹೆಚ್ಚುತ್ತಿದೆ; ಇದು ಐದು ವರ್ಷಗಳ ಹಿಂದೆ ಶೇ. ೧೧ ರಷ್ಟಿತ್ತು ಮತ್ತು ಈಗ ಶೇ. ೧೬ ರಷ್ಟಿದೆ" ಎಂದು ಅದು ಹೇಳಿದೆ. ಬಿಎಐ ಪ್ರಕಾರ, ಕರ್ನಾಟಕವು ಬಿಯರ್ ಉದ್ಯಮಕ್ಕೆ ಅನುಕೂಲಕರ ಹೂಡಿಕೆ ತಾಣವಾಗಿದೆ, ಬಿಯರ್ ತಯಾರಕರು ರಾಜ್ಯದಲ್ಲಿ ಇಲ್ಲಿಯವರೆಗೆ ರೂ. ೩,೫೦೦ ಕೋಟಿ ಹೂಡಿಕೆ ಮಾಡಿದ್ದಾರೆ. ರಾಜ್ಯದಲ್ಲಿ ೧೦ಕ್ಕೂ ಹೆಚ್ಚು ಬ್ರೂವರೀಸ್ಗಳಿದ್ದು ಇದು ದೇಶದ ಇತರ ಯಾವುದೇ ರಾಜ್ಯಕ್ಕಿಂತ ಅತ್ಯಧಿಕವಾಗಿದೆ.
- ಕೋವರ್ ಕೊಲ್ಲಿ ಇಂದ್ರೇಶ್