ಗೋಣಿಕೊಪ್ಪಲು, ಏ.೧೨ : ದ.ಕೊಡಗಿನ ಶ್ರೀಮಂಗಲ, ಬೀರುಗ, ವೆಸ್ಟ್ ನೆಮ್ಮಾಲೆ, ತೆರಾಲು, ಕುರ್ಚಿ ಸೇರಿದಂತೆ ಇನ್ನಿತರ ಗ್ರಾಮದಲ್ಲಿ ಹುಲಿಯ ಸಂಚಾರ ಹೆಚ್ಚಾಗಿದ್ದು ಈ ಭಾಗದ ಹಲವು ರೈತರ, ಬೆಳೆಗಾರರ ಜಾನುವಾರುಗಳು ಹುಲಿಗಳಿಗೆ ಬಲಿಯಾಗಿವೆ.
ಈ ಹಿನ್ನೆಲೆಯಲ್ಲಿ ಅರಣ್ಯದಿಂದ ಆಗಮಿಸಿರುವ ಹುಲಿಯನ್ನು ಅರಣ್ಯ ಸಿಬ್ಬಂದಿಗಳು ಹಿಂದಕ್ಕೆ ಓಡಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ನಾಗರಿಕರು ಭಯಭೀತರಾಗಿದ್ದಾರೆ.
ಹುಲಿಯ ಸೆರೆಗೆ ಕ್ರಮಕೈಗೊಳ್ಳಲು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಅವರನ್ನು ನಾಗರೀಕರು ಒತ್ತಾಯ ಮಾಡಿದ್ದರು.
ನಾಗರಿಕರ ಒತ್ತಾಯ ಮೇರೆಗೆ ಶ್ರೀಮಂಗಲಕ್ಕೆ ತೆರಳಿದ ಸಂಕೇತ್ ಪೂವಯ್ಯ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಹಲವು ಪ್ರಮುಖರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಈಗಾಗಲೇ ಶಾಸಕ ಎ.ಎಸ್.ಪೊನ್ನಣ್ಣ ಅವರ ಶಿಫಾರಸ್ಸು ಮೇರೆಗೆ ಹುಲಿ ಸೆರೆ ಹಿಡಿಯಲು ಇಲಾಖೆಯ ವತಿಯಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಮುಂದಾಗುವAತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿದ್ದ ಪ್ರಮುಖರು ಪ್ರಮುಖರು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.
ಮೊದಲಿಗೆ ಹುಲಿ ಹೆಜ್ಜೆ ಗುರುತು ಪತ್ತೆಯಾದ ತೆರಾಲು, ಬಿರುನಾಣಿ ಭಾಗದಲ್ಲಿ ೩೦ ಕ್ಯಾಮೆರ ಟ್ರಾö್ಯಪ್ ಅಳವಡಿಸಿ, ಬೋನ್ ಇಡಲು ಸೂಚನೆ ನೀಡಿದರು. ಹುಲಿಯ ಚಲನವಲನಗಳನ್ನು ಗಮನಿಸಲು ಸಾಧ್ಯವಾಗದಿದ್ದಲ್ಲಿ ಹುಲಿಯ ಸೆರೆಗೆ ಬೇಕಾದ ಕ್ರಮವನ್ನು ಕೈಗೊಳ್ಳಲು ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಲವು ಮಾಹಿತಿ ಒದಗಿಸಿದರು. ಹುಲಿಯ ಹೊಸ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ಸಭೆಗೆ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಸಂಕೇತ್ ಪೂವಯ್ಯ, ಈಗಾಗಲೇ ಹುಲಿಯ ಉಪಟಳದ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಲಾಗಿದೆ. ಹುಲಿ ಸೆರೆಗೆ ಬೇಕಾದ ಆದೇಶ ಲಭ್ಯವಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಗೆ ಬೇಕಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಶ್ರೀಮAಗಲ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಟಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಂ.ಬಾಲಕೃಷ್ಣ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಚೊಟ್ಟೆಯಂಡಮಾಡ ಉದಯ, ಅಪ್ಪಚ್ಚಂಗಡ ಮೋಟಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮುಖಂಡರಾದ ಮಚ್ಚಮಾಡ ಉದಯ ಸೇರಿದಂತೆ ಅನೇಕ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.