ಮಡಿಕೇರಿ, ಏ. ೧೧: ಕಳೆದ ೨ ದಶಕಗಳಿಂದ ಮಡಿಕೇರಿ ನಗರವನ್ನು ಕಾಡುತ್ತಿದ್ದ ಕಸದ ಸಮಸ್ಯೆಗೆ ಅಂತ್ಯ ಹಾಡುವ ಕಾಲ ಬಂದಿದೆ ಎಂಬ ನಿರೀಕ್ಷೆಗಳು ಇದೀಗ ಗರಿಗೆದರಿವೆ.

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ನಗರದ ಸುಬ್ರಹ್ಮಣ್ಯನಗರದ ಸ್ಟೋನ್ ಹಿಲ್ ನಲ್ಲಿ ಶೇಖರಣೆಗೊಂಡಿದ್ದ ಪಾರಂಪರಿಕ ಕಸಗಳ ವಿಲೇವಾರಿಗೆ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲನೇ ಅವಧಿಯಲ್ಲಿ ಘೋಷಿಸಿ ಭಾರತದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಿದರು. ಎಲ್ಲೆಡೆ ಕಸ ವಿಲೇವಾರಿ ಸಮಸ್ಯೆ ಇದ್ದು, ಇದನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದರು. ಮಡಿಕೇರಿಯ ಕಸ ವಿಲೇವಾರಿಗೆ ಕೇಂದ್ರ ಸರಕಾರ ಶೇ. ೫೦, ರಾಜ್ಯ ಶೇ. ೩೩, ನಗರಸಭೆ ಶೇ. ೧ ೭ರಷ್ಟು ಅನುದಾನ ನೀಡಿದೆ. ಕ್ಷೇತ್ರದ ಎಲ್ಲಾ ರೀತಿ ಅಭಿವೃದ್ಧಿ ಕೆಲಸಕ್ಕೂ ಸ್ಪಂದನ ನೀಡುತ್ತೇನೆ. ಜಿಲ್ಲೆಯಲ್ಲಿ ಅಮೃತ್ ೨.೦ ಯೋಜನೆಯಡಿಯಲ್ಲಿ ನೀರಿನ ಸಂಪರ್ಕ ಒದಗಿಸಲಾಗುತ್ತಿದೆ. ಮಡಿಕೇರಿಯಲ್ಲಿ ಎನ್‌ಡಿಆರ್‌ಎಫ್ ಅಡಿ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಜನರಿಗೆ ಲಾಭವಾಗುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಕಸ ವಿಲೇವಾರಿ ಕಾರ್ಯ ಶೀಘ್ರದಲ್ಲಿ ಈ ಆಗಬೇಕು. ನೂತನ ಕಸ ವಿಲೇವಾರಿ ಘಟಕ ಸಂಬAಧ ಗುರುತಿಸಿರುವ ಜಾಗದಲ್ಲಿ ಅರಣ್ಯ

(ಮೊದಲ ಪುಟದಿಂದ) ಇಲಾಖೆಯಿಂದ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಶಾಸಕರು ಇದನ್ನು ಬಗೆಹರಿಸಿಕೊಡಬೇಕೆಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮಡಿಕೇರಿಯಲ್ಲಿ ಹಲವು ವರ್ಷಗಳಿಂದ ಕಸದ ಸಮಸ್ಯೆ ಇದೆ. ವ್ಯವಸ್ಥೆ ಬದಲಾವಣೆ ಮಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಕಸ ತೆರವು ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಡಿಕೇರಿ ಸೇರಿದಂತೆ ಕುಶಾಲನಗರ, ಮಡಿಕೇರಿಯಲ್ಲಿ ಒಟ್ಟು ರೂ. ೧೨ ಕೋಟಿ ವೆಚ್ಚದಲ್ಲಿ ಕಸ ತೆರವಿಗೆ ಕ್ರಮ ವಹಿಸಲಾಗಿದೆ. ತೆರವು ಕಾರ್ಯ ಪೂರ್ಣವಾಗಿ ಮುಗಿಯುವ ತನಕ ಕೆಲಸ ನಿಲ್ಲಿಸಬಾರದು. ಸ್ಥಳೀಯರಿಗೂ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಕಸವನ್ನು ವೈಜ್ಞಾನಿಕವಾಗಿ ತೆರವು ಮಾಡಬೇಕಾಗಿದೆ. ಗಾಳಿಯ ಶುದ್ಧತೆಯಲ್ಲಿ ಮಡಿಕೇರಿ ಅಗ್ರಸ್ಥಾನದಲ್ಲಿದೆ. ಆದರೆ, ಇಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ತೆರವು ಕಾರ್ಯ ಸಂದರ್ಭ ಸ್ಥಳೀಯರ ಸಹಕಾರವೂ ಅತಿ ಮುಖ್ಯವಾಗಿರುತ್ತದೆ ಎಂದರು.

ಕಸ ವಿಲೇವಾರಿಗೆ ಗುರುತಿಸಿರುವ ೧೦ ಎಕರೆ ಜಾಗದಲ್ಲೂ ವೈಜ್ಞಾನಿಕವಾಗಿ ಘಟಕ ನಿರ್ಮಾಣವಾಗಬೇಕು. ಸ್ವಚ್ಛತೆಯ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಒಂದಾಗಬೇಕು. ವಾರ್ಡ್ಗಳಲ್ಲಿ ತಂಡವಾಗಿ ಅಭಿಯಾನ ಕೈಗೊಂಡು ಸ್ವಚ್ಛ ನಗರಕ್ಕೆ ಪಣ ತೊಡಬೇಕೆಂದು ಕರೆ ನೀಡಿದ ಮಂತರ್, ಮಡಿಕೇರಿಯಲ್ಲಿ ಪ್ಲಾಸ್ಟಿಕ್ ಬಾಟಲಿ ನಿಷೇಧಿಸಿರುವುದು ನಾಮಕಾವಸ್ಥೆ ಎಂದಾಗಬಾರದು. ಕಸ ತೆರವಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದರೆ ಆ ಬಗ್ಗೆಯೂ ಕ್ರಮವಹಿಸಲಾಗುವುದು ಎಂದರು.

ಸ್ಥಳೀಯ ನಿವಾಸಿ ಎಸ್‌ಆರ್‌ವಿಕೆ ಅಸೋಷಿಯೇಷನ್ ಅಧ್ಯಕ್ಷ ನಾಳಿಯಂಡ ನಾಣಯ್ಯ ಮಾತನಾಡಿ, ಮಡಿಕೇರಿ ನಗರದ ಕಂಟಕ ದೂರ ಆಗುವ ನಿರೀಕ್ಷೆ ಸೃಷ್ಟಿಯಾಗಿದೆ. ೨೦೦೫ರಲ್ಲಿ ಕಸ ವಿಲೇವಾರಿ ಇಲ್ಲಿ ಆರಂಭಗೊAಡಿತು. ೨೦೧೩ ರಿಂದ ಇದರ ದುಷ್ಪರಿಣಾಮ ಹೆಚ್ಚಾಯಿತು. ಇದಕ್ಕಾಗಿ ಸಮಿತಿ ರಚಿಸಿ ಹಲವು ವರ್ಷಗಳಿಂದ ಸಮಸ್ಯೆ ಪರಿಹಾರದ ಕುರಿತು ಗಮನ ಸೆಳೆಯಲಾಗುತ್ತಿತ್ತು. ನ್ಯಾಯಾಂಗ ಹೋರಾಟವೂ ಮಾಡಿದೆವು. ಇಷ್ಟೆಲ್ಲದರ ನಡುವೆ ಶಾಸಕ ಮಂತರ್ ಗೌಡ ಮುತುವರ್ಜಿಯಿಂದ ಸದ್ಯ ಸಮಸ್ಯೆ ಪರಿಹಾರ ಸಾಧ್ಯವಾಗಿದೆ. ಸಂಸದ ಯದುವೀರ್ ಅವರ ಸಹಕಾರವೂ ಈ ನಿಟ್ಟಿನಲ್ಲಿ ಬೇಕಾಗಿದೆ. ನೆಮ್ಮದಿಯ ಉಸಿರಾಡಲು ವಾತಾವರಣ ಸೃಷ್ಟಿಸಬೇಕು ಎಂದರು.

ವೇದಿಕೆಯಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಸದಸ್ಯರುಗಳಾದ ಕಾಳಚಂಡ ಅಪ್ಪಣ್ಣ, ನೆರವಂಡ ಅನಿತಾ ಪೂವಯ್ಯ, ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.