ನಾಪೋಕ್ಲು, ಏ. ೭: ಶಿಸ್ತು ಸಂಯಮ ಉತ್ತಮ ಗುಣ ನಡತೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಂದ ಕೂಡಿದ ಶಾಲೆಯು ಉತ್ತಮ ಶಾಲೆ ಆಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲರಾದ ಚೌರಿರ ಡಾ. ಜಗತ್ ತಿಮ್ಮಯ್ಯ ಹೇಳಿದರು .

ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ವತಿಯಿಂದ ಇಲ್ಲಿಯ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆಯು ವಿದ್ಯಾರ್ಥಿಗಳು ಮುಖ್ಯವಾಗಿ ರೂಡಿಸಿಕೊಳ್ಳಬೇಕಾದ ಅಂಶವಾಗಿದೆ. ಇಂದು ಕಾವೇರಿ ನದಿ ತಟ ಬಹಳ ಕಲುಷಿತವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತದೆ. ನಾವು ವಾಸಿಸುವ ಪ್ರದೇಶ ಉತ್ತಮವಾಗಿರ ಬೇಕು ಗಾಳಿ ನೀರು, ಮಣ್ಣು, ಗಾಳಿ ಮಲಿನವಾಗದಂತೆ ನೋಡಿ ಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅದನ್ನು ವಿದ್ಯಾರ್ಥಿಗಳು ಅರಿತು ಕೊಂಡು ಪರಿಸರ ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು.

ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ ಮಾತನಾಡಿ ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ವ್ಯಕ್ತಿಗಳು ತಪ್ಪು ಮಾಡುತ್ತಾರೆ. ಆ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಮುಂದುವರಿಯಬೇಕು ವಿದ್ಯಾರ್ಥಿಗಳು ೧೦ನೇ ತರಗತಿಯವರೆಗೆ ಮಕ್ಕಳಾಗಿರಬೇಕು ಮಕ್ಕಳ ಜೀವನ ಅಮೂಲ್ಯವಾದದ್ದು. ಉತ್ತಮ ವ್ಯಕ್ತಿತ್ವವನ್ನು ಮಕ್ಕಳು ರೂಪಿಸಿಕೊಳ್ಳಲು ಶಾಲೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶಾಲೆಯು ಕಲಿಸಿಕೊಟ್ಟಿದೆ. ತಮ್ಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿರುವ ಶಾಲೆಯ ಬಗ್ಗೆ ವಿದ್ಯಾರ್ಥಿಗಳು ಪೋಷಕರು ಉತ್ತಮ ಪ್ರೀತಿ ಬಾಂಧವ್ಯವನ್ನು ಹೊಂದಿರಬೇಕು ಎಂದು ಮಕ್ಕಳಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಂಕುರ್ ಶಾಲೆಯ ಅಧ್ಯಕ್ಷರಾದ ಕೇಟೋಳಿರ ಚರ್ಮಣ್ಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಅರ್ಹತಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಟ್ರಸ್ಟಿ ಪಿ.ಕೆ. ಗಾಯನ್ ಗೌರಮ್ಮ, ವಿದ್ಯಾರ್ಥಿಗಳ ಪೋಷಕರು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿಂಚನ ಪಿ.ಸಿ. ಸ್ವಾಗತಿಸಿದ ಕಾರ್ಯಕ್ರಮವನ್ನು ಬಿ.ಕೆ ಕನ್ನಿಕಾ ಮತ್ತು ಬಿ. ಯನ್ ಸೋಮಣ್ಣ ನಿರೂಪಿಸಿ ಗಾನ್ಯ ಸುಬ್ಬಯ್ಯ ವಂದಿಸಿದರು.