ಸಿದ್ದಾಪುರ, ಏ. ೨: ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿಗೆ ಕರ್ನಾಟಕ ರಾಜ್ಯದಿಂದ ನಾಮನಿರ್ದೇಶನಗೊಂಡಿರುವ ಏಕೈಕ ಗ್ರಾಮ ಪಂಚಾಯಿತಿ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಯ ಆಡಳಿತ, ಅಭಿವೃದ್ಧಿ ಕಾರ್ಯಗಳ ಕುರಿತು ಸ್ಥಳ ಭೇಟಿಗೆ ಕೇಂದ್ರ ಸರಕಾರದ ಇಂಧನ ಇಲಾಖೆಯ ನಿರ್ದೇಶಕ ಅರುಣ್ ಕುಮಾರ್ ಗಾರ್ಗ್ ನೇತೃತ್ವದ ತಂಡ ಭೇಟಿ ನೀಡಿ ಪಂಚಾಯಿತಿ ಆಡಳಿತ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ ಕೊಟ್ಟಮುಡಿ, ಹೊದ್ದೂರು ಗ್ರಾಮ ಪಂಚಾಯಿತಿ ಇದೀಗ ರಾಷ್ಟçಮಟ್ಟದಲ್ಲಿ ಹೆಸರುಗಳಿಸಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಇಡೀ ಕರ್ನಾಟಕದಲ್ಲೇ ಹೊದ್ದೂರು ಗ್ರಾಮ ಪಂಚಾಯಿತಿ ಮಾದರಿ ಪಂಚಾಯಿತಿ ಎಂಬ ಹೆಮ್ಮೆ ಇದೆ. ಪ್ರಶಸ್ತಿಗೆ ರಾಜ್ಯದಿಂದ ಹೊದ್ದೂರು ಗ್ರಾಮ ಪಂಚಾಯಿತಿ ಮಾತ್ರ ನಾಮ ನಿರ್ದೇಶನಗೊಂಡಿರುವುದು ಮತ್ತಷ್ಟು ಸಂತಸ ತಂದಿದೆ. ಹೊದ್ದೂರು ಗ್ರಾಮ ಪಂಚಾಯಿತಿಗೆ ರಾಷ್ಟçಮಟ್ಟದ ಪ್ರಶಸ್ತಿ ಸಿಗುವ ವಿಶ್ವಾಸ ಇದೆ ಎಂದು ಹೆಚ್.ಎ ಹಂಸ ಕೊಟ್ಟಮುಡಿ ಹೇಳಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಅನುರಾಧ, ಸದಸ್ಯರಾದ ಎಂ.ಬಿ ಹಮೀದ್, ಕೆ. ಮೊಣ್ಣಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಅಬ್ದುಲ್ ನಬಿ ಯಾದಗಿರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಲೈಸನಿಂಗ್ ಅಧಿಕಾರಿಗಳಾದ ಪೂಣಚ್ಚ, ನಂದೀಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್, ಸಿಬ್ಬಂದಿ ವರ್ಗ ಹಾಜರಿದ್ದರು.