ಮಡಿಕೇರಿ, ಏ. ೨: ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ತಾ. ೫ ಮತ್ತು ೬ ರಂದು ೩೫ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್. ವಿನೋದ್ ಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೫ ರಂದು ಸಂಜೆ ೪ ಗಂಟೆಗೆ ನಗರದ ಗಾಂಧಿ ಮೈದಾನದಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಚಂಡೆ, ತೈಯಂ ಕುಣಿತ, ಫ್ಲವರ್ ಡ್ಯಾನ್ಸ್, ತಮಟೆ, ರಾಮ, ಆಂಜನೇಯ ವೇಷಧಾರಿಗಳು, ಹುಲಿ ವೇಷ, ಭಜನಾ ತಂಡಗಳು, ಕಳಸ ಹಾಗೂ ರಾಮನ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯು ನಗರದ ಗಾಂಧಿ ಮೈದಾನ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಚೌಕಿ, ಮಹದೇವಪೇಟೆ, ಮಾರುಕಟ್ಟೆ, ಶ್ರೀಚೌಡೇಶ್ವರಿ ದೇವಾಲಯ ಮೂಲಕ ಎ.ವಿ ಶಾಲೆ ಹಿಂಭಾಗ, ಶ್ರೀಮುತ್ತಪ್ಪ ದೇವಾಲಯ ರಸ್ತೆಯಿಂದ ಶ್ರೀಕೋದಂಡರಾಮ ದೇವಾಲಯಕ್ಕೆ ತಲುಪಲಿದೆ. ಅಲ್ಲಿಂದ ಪಲ್ಲಕ್ಕಿಯನ್ನು ಹೊತ್ತು ಪೂಜೆ ಸಲ್ಲಿಸಿದ ನಂತರ ಅನ್ನದಾನ ನೆರವೇರಲಿದೆ. ರಾತ್ರಿ ೮ ಗಂಟೆಗೆ ವಿವಿಧ ಸಮುದಾಯಗಳಿಂದ ಆಕರ್ಷಕ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ತಿಳಿಸಿದರು.
ಮೆರವಣಿಗೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಮೋಹಳ್ಳಿ ಶ್ರೀ ಸಿದ್ದಾರೂಢ ಮಿಷನ್ ಆಶ್ರಮದ ಶ್ರೀ ಡಾ.ಆರೂಢ ಭಾರತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ತಾ.೬ ರಂದು ಶ್ರೀ ಕೋದಂಡ ರಾಮ ದೇವಾಲಯದ ಕ್ಷೇತ್ರ ತಂತ್ರಿಗಳಾದ ಬ್ರ.ಶ್ರೀ.ವೇ.ಮೂ. ಶ್ರೀಕೃಷ್ಣ ಉಪಾಧ್ಯ ಅವರಿಂದ ಬೆಳಿಗ್ಗೆ ೭.೩೦ ರಿಂದ ತತ್ವ ಕಳಸ ಹೋಮ, ನವಗ್ರಹ ಹೋಮ, ತತ್ವ ಕಳಶಾಭಿಷೇಕ, ಬೆಳಿಗ್ಗೆ ೮ ಗಂಟೆಯಿAದ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಕಲಾ ಹೋಮ, ಶಾಂತಿ ಹೋಮ, ನವಕ ಪ್ರಧಾನ ಕಳಶಾಭಿಷೇಕ, ೧೧ ಗಂಟೆಯಿAದ
(ಮೊದಲ ಪುಟದಿಂದ) ೧೨ ಗಂಟೆಯವರೆಗೆ ಉತ್ಸವ ಮೂರ್ತಿಯ ದೇವÀ ದರ್ಶನ ಬಲಿ, ಬಟ್ಟಲು ಕಾಣಿಕೆ, ಅಲಂಕಾರ ಪೂಜೆ ನೆರವೇರಲಿದೆ. ೧೨.೩೦ ಗಂಟೆಗೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ತೀರ್ಥಪ್ರಸಾದ, ಕೋಸಂಬರಿ, ಪಾನಕ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಿಡಿ ಮದ್ದಿನೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ವಿನೋದ್ ಕುಮಾರ್ ಮಾಹಿತಿ ನೀಡಿದರು.
ಉತ್ಸವ ಸಮಿತಿ ಖಜಾಂಚಿ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ೩೫ನೇ ವರ್ಷದ ರಾಮೋತ್ಸವವನ್ನು ಸಂಭ್ರಮದಿAದ ಆಚರಿಸುವ ಸಲುವಾಗಿ ಹೊಸ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಸಮುದಾಯದವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.
ರಾಮೋತ್ಸವದ ಅಂಗವಾಗಿ ತಾ.೫ ರಂದು ಕೊಡಗು ಮೆಡಿಕಲ್ ಕಾಲೇಜು ವತಿಯಿಂದ ಶ್ರೀ ಕೋದಂಡರಾಮ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ೧೦.೩೦ ರಿಂದ ೧೨.೩೦ರ ವರೆಗೆ ರಕ್ತ ಪರೀಕ್ಷೆ ಮತ್ತು ರಕ್ತದೊತ್ತಡ (ಬಿಪಿ) ಪರೀಕ್ಷೆ ಮಾಡಲಾಗುವುದು, ೪೦ ವರ್ಷ ಮೇಲ್ಪಟ್ಟವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಸ್ಪತ್ರೆ ಚಿಕಿತ್ಸೆಯ ಹಳೆ ದಾಖಲಾತಿ ಇದ್ದಲ್ಲಿ ತರುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷ ಎನ್.ಪರಮೇಶ್, ರಾಮ ಸೇವಾ ಸಮಿತಿ ಅಧ್ಯಕ್ಷ ಆರ್. ವಿಶ್ವನಾಥ್, ಸ್ವಾಗತ ಸಮಿತಿ ಉಪಾಧ್ಯಕ್ಷ ಟಿ.ಜಿ. ಸತೀಶ್, ಸದಸ್ಯ ನಿವೃತ್ತ ಎಸಿಎಫ್ ತಿಮ್ಮಯ್ಯ ಉಪಸ್ಥಿತರಿದ್ದರು.