ವೀರಾಜಪೇಟೆ, ಮಾ. ೨೨: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್, ಸಮಾಜದಲ್ಲಿ ಗುರುತಿಸಲ್ಪಟ್ಟವರಿಗೆ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಹಮ್ಮಿಕೊಂಡಿದ್ದು ಸನ್ಮಾನಿತರು ಬೇಟೋಳಿ ಪಂಚಾಯಿತಿಗೆ ಹೆಮ್ಮೆಯಾಗಿರುತ್ತಾರೆ ಎಂದರು. ಮತ್ತೋರ್ವ ಸದಸ್ಯೆ ಯಶೋಧ ಮಾತನಾಡಿ, ಸಾಧಕರನ್ನು ನಮ್ಮ ಪಂಚಾಯಿತಿ ವತಿಯಿಂದ ಸನ್ಮಾನಿಸುತ್ತಿದ್ದು ನಮಗೆಲ್ಲರಿಗೂ ಸಂತಸದ ವಿಚಾರವಾಗಿದೆ. ಸಾಧಕರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಸಮಾರಂಭದಲ್ಲಿ ಹೆಗ್ಗಳ ಗ್ರಾಮದಲ್ಲಿ ಆರೋಗ್ಯ ಇಲಾಖಾ ಶುಷ್ರೂಶಕಿಯಾಗಿ ೩೭ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ರಮಿತ, ಬೇಟೋಳಿ ಗುಂಡಿಕೆರೆ ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಶ್ರೀ ಕೃಷ್ಣ ಒಡೆಯರ್ ಸದ್ಭಾವನಾ ಪ್ರಶಸ್ತಿ ವಿಜೇತರಾದ ಎಂ.ಎA. ಇಸ್ಮಾಯಿಲ್, ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ವಿಜೇತೆ ಬೇಟೋಳಿ ಗುಂಡಿಕೆರೆ ಶಾಲೆಯ ಮುಖ್ಯ ಶಿಕ್ಷಕಿ ಸೀತಾ, ಬೇಟೋಳಿ ಪಂಚಾಯಿತಿ ಯಲ್ಲಿ ಶೇ. ೧೦೦ ರಷ್ಟು ಕರ ಸಂಗ್ರಹಣೆ ಮಾಡುವುದರ ಮೂಲಕ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಿದ ಪಂಚಾಯಿತಿಯ ಕರ ಸಂಗ್ರಹಕಾರ ದಿನೇಶ್ ಬಿ.ಎಸ್. ಕರ ಸಂಗ್ರಹಣೆ ಹಾಗೂ ಪಂಚಾಯಿತಿಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಹಾಗೂ ಕ್ಲರ್ಕ್ ಕೆ.ಬಿ. ರಮಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಬೇಟೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಸದಸ್ಯರಾದ ಅಮ್ಮಣಕುಟ್ಟಂಡ ವಸಂತ ಕಟ್ಟಿ ಹಾಗೂ ಪಂಚಾಯಿತಿ ಸಿಬ್ಬಂದಿ ಆಯೆಷಾ ನಡೆಸಿಕೊಟ್ಟರು. ಸನ್ಮಾನಿತರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ. ಬೋಪಣ್ಣ ಮಾತನಾಡಿ, ಸನ್ಮಾನಿತರು ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದು ಗ್ರಾಮಕ್ಕೆ ಹೆಮ್ಮೆಯಾಗಿದೆ ಎಂದರು. ವೇದಿಕೆಯಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಲೀಮಾ, ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆ ಯರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.