ಸೋಮವಾರಪೇಟೆ, ಮಾ. ೨೨: ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಕಳೆದ ೧೩ ವರ್ಷಗಳಿಂದ ನಿವೇಶನ ನೀಡದೇ ಸತಾಯಿಸುತ್ತಿದ್ದು, ಹೋರಾಟದ ಅಂತಿಮ ಭಾಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಲಾಗಿದ ಎಂದು ನಿವೃತ್ತ ಅರೆಸೇನಾಪಡೆ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ. ಯತೀಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೩ ವರ್ಷಗಳಿಂದ ನಿವೃತ್ತ ಯೋಧರ ಒಕ್ಕೂಟಕ್ಕೆ ನಿವೇಶನ ನೀಡುವಂತೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಈವರೆಗೆ ಜಾಗವನ್ನು ಹಸ್ತಾಂತರಿಸಿಲ್ಲ. ಮಡಿಕೇರಿ ತಾಲೂಕು ಕಚೇರಿ, ಕರ್ಣಂಗೇರಿ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದು ಸಾಕಾಗಿದ್ದು, ಮುಂದಿನ ಒಂದು ತಿಂಗಳ ಒಳಗೆ ಒಕ್ಕೂಟಕ್ಕೆ ಜಾಗ ನೀಡದಿದ್ದರೆ, ಡಿ.ಸಿ. ಕಚೇರಿ ಎದುರು ಜಿಲ್ಲಾದ್ಯಂತ ಇರುವ ಸಂಘಟನೆಯ ಸದಸ್ಯರು ಒಗ್ಗೂಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಕರ್ಣAಗೇರಿ ಗ್ರಾಮದಲ್ಲಿ ೨೦ ಸೆಂಟ್ ಜಾಗವನ್ನು ನೀಡುವಂತೆ ಮನವಿ ಮಾಡಿದ ಹಿನ್ನೆಲೆ ಸರ್ಕಾರದಿಂದ ೨ ಬಾರಿ ಸರ್ವೆ ಮಾಡಿ ಜಾಗ ವಿಂಗಡಣೆ ಮಾಡಿದ್ದಾರೆ. ಇದಾದ ನಂತರ ಜಾಗ ನಮ್ಮ ಹದ್ದುಬಸ್ತಿನಲ್ಲಿದ್ದರೂ ಈವರೆಗೆ ದಾಖಲೆಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.
ಈ ಹಿಂದಿನ ಶಾಸಕರಿಗೂ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಈಗಿನ ಈರ್ವರು ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಶಾಸಕರುಗಳು ಹೇಳಿದರೂ ಸಹ ಅಧಿಕಾರಿಗಳ ಕೆಲಸ ಮಾಡುತ್ತಿಲ್ಲ. ನೆರೆಯ ಹಾಸನ ಜಿಲ್ಲೆಯಲ್ಲಿ ೨೦೦ ರಷ್ಟು ಸದಸ್ಯರಿದ್ದರೂ ಈಗಾಗಲೇ ಜಾಗ ಮಂಜೂರಾಗಿ ೨ ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಕೊಡಗಿನಲ್ಲಿ ೮೦೦ ಸದಸ್ಯರಿದ್ದರೂ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆ ಮುಂದಿನ ೧ ತಿಂಗಳ ಒಳಗಾಗಿ ಒಕ್ಕೂಟಕ್ಕೆ ನಿವೇಶನ ಒದಗಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದರೊಂದಿಗೆ ಅರೆಸೇನಾ ಪಡೆಯ ಮಾಜಿ ಸೈನಿಕರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರದ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಟ್ಟದಲ್ಲಿ ಯಾವುದೇ ನೆರವು ಲಭಿಸುತ್ತಿಲ್ಲ. ಈ ಹಿನ್ನೆಲೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ನಮ್ಮನ್ನೂ ಒಳಪಡಿಸಿ ಸೌಲಭ್ಯ ನೀಡಬೇಕು. ತಪ್ಪಿದ್ದಲ್ಲಿ ಅರೆಸೇನಾ ಪಡೆಯ ನಿವೃತ್ತ ಸೈನಿಕರಿಗೆ ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಅಥವಾ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಅರೆ ಸೇನಾಪಡೆಯ ನಿವೃತ್ತರಿಗೆ ಸಿಜಿಹೆಚ್ಎಸ್ ಆರೋಗ್ಯ ಕಾರ್ಡ್ ಒದಗಿಸಿ ಸಿಜಿಹೆಚ್ಎಸ್ ವೆಲ್ನೆಸ್ ಸೆಂಟರ್ ಸ್ಥಾಪನೆ ಮಾಡಬೇಕು. ಮದುವೆ ಸಮಾರಂಭದಲ್ಲಿ ಮದ್ಯ ಬಳಕೆಗೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕೆಂಬ ನಿಯಮ ವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಕೈ ಹಾಕದೇ, ಈಗಿರುವ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಿ, ಉಳಿಸಿಕೊಳ್ಳ ಬೇಕು. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕ ಎನ್.ಎಂ. ಭೀಮಯ್ಯ, ಜಂಟಿ ಕಾರ್ಯದರ್ಶಿ ಬಿ.ಎನ್. ರಾಜಶೇಖರ್, ಕಾರ್ಯದರ್ಶಿ ಬಿ.ಎಂ. ರವೀಂದ್ರ, ನಿರ್ದೇಶಕಿ ಡಿ.ಎಸ್. ನಳಿನಿಕುಮಾರಿ ಅವರುಗಳು ಉಪಸ್ಥಿತರಿದ್ದರು.