ಶನಿವಾರಸಂತೆ, ಮಾ. ೧೮: ರೋಟರಿ ಸಂಸ್ಥೆಯ ನಿಧಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದ್ವಿನಿಯೋಗವಾಗಿ ಸಮಾಜವನ್ನು ಬದಲಾಯಿಸುವ ಕಾರ್ಯ ನಡೆಯಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಹೇಳಿದರು.
ಸಮೀಪದ ಬೆಳ್ಳಾರಳ್ಳಿ ಗ್ರಾಮದ ಇಳಿಜಾರು ತಿರುವು ರಸ್ತೆಯಲ್ಲಿ ೪ ದಿಕ್ಕಿನಲ್ಲಿ ವಾಹನ ಚಾಲಕರ ಹಿತದೃಷ್ಟಿಯಿಂದ “ಅಪಘಾತ ವಲಯ’’, “ಇಳಿಜಾರು ರಸ್ತೆ ನಿಧಾನವಾಗಿ ಚಲಿಸಿ’’ ಎಂಬ ಸೂಚನಾ ಫಲಕವನ್ನು ಉದ್ಘಾಟಿಸಿ, ನಂತರ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ನಡೆದ ಸೌಹಾರ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ ತಾತ್ಕಾಲಿಕ ಸಂತೋಷ ಕೊಡುತ್ತದೆ. ಶಾಶ್ವತ ಸಂತೋಷ ಸಮಾಜಮುಖಿ ಸೇವೆಯಲ್ಲಿದೆ. ಉತ್ತಮ ಕೆಲಸಕ್ಕೆ ಕೃತಜ್ಞತೆಯ ಕಣ್ಣೀರು ಸಂತೃಪ್ತಿ ತರುತ್ತದೆ. ಶನಿವಾರಸಂತೆ ರೋಟರಿ ಸಂಸ್ಥೆ ಪ್ರತಿವರ್ಷ ಕಾರ್ಮಿಕರಿಗೆ ಟಿಟಿ ಚುಚ್ಚುಮದ್ದು ಹಾಗೂ ಉಚಿತ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕಿಸುತ್ತಿರುವ ಕಾರ್ಯ ಶ್ಲಾಘನೀಯ. ಪ್ರಸ್ತುತ ೪ ಕಡೆ ಅಳವಡಿಸಿ ಉದ್ಘಾಟಿಸಿದ ಸೈನ್ ಬೋರ್ಡ್ ಉತ್ತಮ ಕೆಲಸವಾಗಿದ್ದು, ರೋಟರಿಯ ಹಣ ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗಲಿ ಎಂದು ಅವರು ಹಾರೈಸಿದರು.
ಮುಖ್ಯ ಅತಿಥಿ ಜಿಲ್ಲಾ ಸಹಾಯಕ ಗವರ್ನರ್ ಹರಿ ಎ.ಶೆಟ್ಟಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನಿಸಿದ ಊರಲ್ಲಿ ರೋಟರಿ ಸಂಸ್ಥೆ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಸಮಾಜಮುಖಿ ಕಾರ್ಯಕ್ಕೆ ಹೆಚ್ಚು ಹಣ ಮುಖ್ಯವಾಗಿದ್ದು ಸದಸ್ಯತ್ವ ಹೆಚ್ಚು ಮಾಡಬೇಕು. ಶೇ.೯೯ ರಷ್ಟು ಹಣ ಸಮಾಜಕ್ಕೆ, ಅರ್ಹ ಜನರಿಗೆ ಸದ್ವಿನಿಯೋಗವಾಗಬೇಕು. ಸದಸ್ಯತ್ವದಿಂದ ಪಡೆಯುವ ಪ್ರಯೋಜನದ ಅರಿವು ಪ್ರತಿ ಸದಸ್ಯನಿಗಿರಬೇಕು ಎಂದರು.
ವಲಯ ಸೇನಾನಿ ಕೆ.ಪಿ. ಜಯಕುಮಾರ್ ಮಾತನಾಡಿ, ಸಮಾಜಕ್ಕೆ ಮೇಣದ ಬತ್ತಿಯಂತೆ ಸೇವೆ ಸಲ್ಲಿಸುವ ಮನೋಭಾವ ಪ್ರತಿ ರೊಟೇರಿಯನ್ಗಳಿಗೆ ಬರಬೇಕು. ಸಮಾಜದಲ್ಲಿ ಶಿಕ್ಷಕ, ಕೃಷಿಕ, ಸೈನಿಕರ ಕಾಯಕ ಗೌರವಯುತವಾದದ್ದು, ಸಂಸ್ಥೆ ಸದಸ್ಯರ ಕಾರ್ಯ ಚಟುವಟಿಕೆ ಜನತೆಯ ಮನಸಲ್ಲಿ ಉಳಿಯಬೇಕು ಎಂದರು.
ಈ ಸಂದರ್ಭ ಸಂಸ್ಥೆ ವತಿಯಿಂದ ಗೌಡಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ವಾಟರ್ ಫಿಲ್ಟರ್ ಅನ್ನು ಶಿಕ್ಷಕ ನಾಗರಾಜ್ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ವಿ.ಎಲ್. ವರ್ಷಿತ್ ಮಾತನಾಡಿ, ವರ್ಷವಿಡಿ ರೋಟರಿ ಸಂಸ್ಥೆ ಮಾಡಿದ ಉತ್ತಮ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿ, ಸಮಾಜಮುಖಿ ಕಾರ್ಯಕ್ಕಾಗಿ ಸದಸ್ಯತ್ವ ಅಧಿಕಗೊಳಿಸುವುದಾಗಿ ತಿಳಿಸಿದರು.
ಶನಿವಾರಸಂತೆ ರೋಟರಿ ಸಂಸ್ಥೆ ಕಾರ್ಯದರ್ಶಿ ಶ್ವೇತಾ ವಸಂತ್, ರೊಟೇರಿಯನ್ ಎಸ್.ಎಚ್. ಯಶವಂತ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಶನಿವಾರಸಂತೆ ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್.ವಿ. ದಿವಾಕರ್, ರೊಟೇರಿಯನ್ ಗಳಾದ ಎ.ಡಿ. ಮೋಹನ್ ಕುಮಾರ್, ಅರವಿಂದ್, ವಸಂತ್ ಕುಮಾರ್, ಎಚ್.ವಿ. ಮೋಹನ್, ಬೀನಾ ಅರವಿಂದ್, ಏರಿ ರೆಸಾರ್ಟ್ ಮಾಲೀಕ ಕೀರ್ತಿ ಕಾಳಿಂಗಪ್ಪ, ಇತರರು ಹಾಜರಿದ್ದರು.
ರೊಟೇರಿಯನ್ ಮೋಹನ್ ಕುಮಾರಿ ಪ್ರಾರ್ಥಿಸಿ, ವರ್ಷಿತ್ ಸ್ವಾಗತಿಸಿದರು. ಶ್ವೇತಾ ವಾರ್ಷಿಕ ವರದಿ ಮಂಡಿಸಿ, ವಂದಿಸಿದರು.