ಕಣಿವೆ, ಮಾ. ೧೭: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲ ಭಾಗದ ಭಕ್ತಜನರ ಗ್ರಾಮದೇವತೆ ಶ್ರೀ ಮಂಟಿಗಮ್ಮನವರ ದ್ವೆöÊವಾರ್ಷಿಕ ಪೂಜೋತ್ಸವದ ಅಂಗವಾಗಿ ದೇವತಾ ಸನ್ನಿಧಿಗೆ ಧಾವಿಸಿ ಬಂದ ಮಹಿಳಾ ಭಕ್ತರು ಅದರಲ್ಲೂ ಹೊಸದಾಗಿ ವಿವಾಹಿತವಾದ ಹೆಣ್ಣುಮಕ್ಕಳು ಕೈತುಂಬಾ ಬಳೆ ತೊಡಿಸಿಕೊಂಡು ಭಕ್ತಿ ಭಾವ ಮೆರೆದರು. ಅಂದರೆ, ಗ್ರಾಮ ದೇವತೆ ಯಲ್ಲಿ ಮಾಂಗಲ್ಯ ಹಾಗೂ ಮುತ್ತೆöÊದೆ ಭಾಗ್ಯವನ್ನು ಹೆಚ್ಚು ಹೆಚ್ಚು ನೀಡೆಂದು ದೇವರಲ್ಲಿ ಪ್ರಾರ್ಥಿಸಿ ಭಕ್ತಿ ಭಾವದಿಂದ ಬಳೆಗಾರರಿಂದ ಬಳೆ ತೊಡಿಸಿ ಕೊಂಡರು.

ಈ ದೇವತಾ ಉತ್ಸವದಲ್ಲಿ ಕೊಡಗಿನ ಗಡಿಗ್ರಾಮಗಳೂ ಸೇರಿದಂತೆ, ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಸಹಸ್ರಾರು ಭಕ್ತ ಜನರು ಪಾಲ್ಗೊಳ್ಳುತ್ತಾರೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಜರುಗುವ ಈ ಗ್ರಾಮ ದೇವತೆ ಬಹಳಷ್ಟು ಶಕ್ತಿ ದೇವತೆಯಾಗಿ ಭಕ್ತ ಜನರ ಇಷ್ಟಾರ್ಥಗಳನ್ನು ಈಡೇರಿಸುವ ಅಧಿದೇವತೆ ಎಂಬ ಪ್ರತೀತಿ ಇದೆ.

ಗ್ರಾಮ ದೇವತೆ ಹಬ್ಬದ ಅಂಗವಾಗಿ ಒಂದು ವಾರಗಳ ಕಾಲ ಗೃಹಿಣಿಯರು ಗ್ರಾಮದಲ್ಲಿ ಒಗ್ಗರಣೆ ಹಾಕಿ ಅಡುಗೆ ಮಾಡುವಂತಿಲ್ಲ ಎಂಬ ಪ್ರತೀತಿಯೂ ಇದೆ.