ವೀರಾಜಪೇಟೆ, ಮಾ. ೧೮: ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಪೊದುಕೇರಿ ಪಂದ್ಯನ್ ಪಾಡ್ ಎಂಬಲ್ಲಿ ಎರಡು ದಿನಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ಗಿಡಗಳು, ಮರಗಳು, ಬಾಳೆ ಹಾಗೂ ಇನ್ನಿತರ ಫಸಲು ನೀಡುತ್ತಿರುವ ಗಿಡಗಳನ್ನು ಹಾನಿಗೊಳಿಸಿವೆ. ಕಾಡಾನೆಯ ಉಪಟಳದಿಂದ ಹಾನಿಗೊಳಗಾದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂತ್ರಸ್ಥ ಗ್ರಾಮಸ್ಥರೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದರು.
ಬಿಟ್ಟಂಗಾಲ ಗ್ರಾ.ಪಂ. ಸದಸ್ಯ ಕಂಜಿತAಡ ಸಂಧ್ಯಾ ಉತ್ತಪ್ಪ ಮಾತನಾಡಿ, ಕಾಡಾನೆಗಳು ಮತ್ತು ವನ್ಯಮೃಗಗಳ ದಾಳಿಯು ಈ ಭಾಗದಲ್ಲಿ ನಿರಂತರವಾಗಿದೆ. ಕೆಲವು ವರ್ಷಗಳ ಹಿಂದೆ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವ ನೆಪದಲ್ಲಿ ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಕಂದಕ ನಿರ್ಮಾಣ ಮಾಡಿತ್ತು. ಆದರೆ ಅದು ಪರಿಪೂರ್ಣವಾಗದೆ ಕಾಡಾನೆಗಳ ಹಾವಳಿ ಕಡಿಮೆಯಾಗಿಲ್ಲ. ಸೋಲಾರ್ ಬೇಲಿಯು ನಿರ್ವಹಣೆ ಇಲ್ಲದೆ ಸೊರಗಿಹೋಗಿದೆ. ಸರ್ಕಾರವು ಕಾಡಾನೆಗಳ ಹಾವಳಿಯನ್ನು ನಿಯಂತ್ರಣ ಮಾಡಲು ಹಲವು ಯೋಜನೆಗಳು ಜಾರಿಗೆ ತಂದರೂ, ಕಾಡಾನೆಗಳ ಹಾವಳಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೆಳೆಗಾರರು ಸಂಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆಗಳ ಮತ್ತು ವನ್ಯಜೀವಿಗಳ ಹಾವಳಿ ನಿಯಂತ್ರಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥ ಕಂಜಿತAಡ ಟೇರಿನ್ ನಾಣಯ್ಯ ಮಾತನಾಡಿ, ಈ ಭಾಗದಲ್ಲಿ ತಿಂಗಳು ಕಾಲ ಕಾಡಾನೆಗಳು ಅರಣ್ಯವನ್ನು ಬಿಟ್ಟು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿವೆ. ಅರಣ್ಯ ಇಲಾಖೆಯು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು. ವನ್ಯಪ್ರಾಣಿಗಳ ಹಾವಳಿ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಮಾಕುಟ್ಟ ವಲಯ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸಂತೋಷ್ ಹೂಗಾರ್ ಮಾತನಾಡಿ, ಅರಣ್ಯದ ಅಂಚಿನಲ್ಲಿ ಕಂದಕ ನಿರ್ಮಾಣ ಅಪೂರ್ಣಗೊಂಡಿರುವುದು, ಸೋಲಾರ್ ಬೇಲಿ ನಿರ್ವಹಣೆ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಕಂದಕ ನಿರ್ಮಾಣ ಕಾರ್ಯ ಮುಂದುವರೆಸಲಾಗುತ್ತದೆ, ಅಲ್ಲದೆ ಸೋಲಾರ್ ಬೇಲಿ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ಎರಡು ವರ್ಷದ ಅವಧಿಗೆ ನೀಡಲಾಗುತ್ತಿದೆ. ಕೆಲವು ತಾಂತ್ರಿಕ ದೋಷಗಳಿಂದ ಸೋಲಾರ್ ಬೇಲಿಯಲ್ಲಿ ದೋಷಗಳು ಕಂಡುಬAದಿದೆ. ಅತೀ ಶೀಘ್ರವಾಗಿ ನ್ಯೂನ್ಯತೆಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿ ಕಂಜಿತAಡ ಪೂವಣ್ಣ, ಧರ್ಮಜಾ ಚೆಂಗಪ್ಪ ಚರಣ್ ಚೇಮಿರ ಕಾಶಿ, ಪ್ರಕಾಶ್ ಪೂವಯ್ಯ, ಮಳವಂಡ ಗಿರೀಶ್, ಅನೂಪ್ ಗಣಪತಿ, ತಮ್ಮಯ್ಯ, ಕಲನ್, ಬೋಪಯ್ಯ, ಮತ್ತು ಗ್ರಾಮಸ್ಥರು ಹಾಜರಿದ್ದರು.