ಸುಂಟಿಕೊಪ್ಪ, ಮಾ.೧೭: ಕೆದಕಲ್ ಗ್ರಾಮದ ಭದ್ರಕಾಳೇಶ್ವರಿ ದೇವಾಲಯದ ೨೫ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮಿ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ದೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು.

ನಂತರ ಕುಂಭಾಭಿಷೇಕ ಮತ್ತು ಕಳಶೆ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ದೇವಿಯ ದರ್ಶನ ದೊರೆತು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಮಾಡಿಕೊಂಡರಲ್ಲದೇ ಹರಕೆಯನ್ನು ಒಪ್ಪಿಸಿದರು.

ಮಧ್ಯಾಹ್ನ ವಿಶೇಷ ಪೂಜೆ, ಆರಾಧನೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನಂತರ ನೆರೆದಿದ್ದ ನೂರಾರು ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯಸಮಿತಿಯ ಅಧ್ಯಕ್ಷ ಸಿ.ಎ. ಕರುಂಬಯ್ಯ, ಕಾರ್ಯದರ್ಶಿ ಕೆ.ಎಂ. ಸತೀಶ್, ತಕ್ಕ ಮುಖ್ಯಸ್ಥರಾದ ಪುಲ್ಲೇರ ತಿಮ್ಮಯ್ಯ, ಪುಲ್ಲೇರ, ಕಾಳಪ್ಪ,ಪಿ.ಬಿ.ವಸಂತ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಕೆದಕಲ್, ಬೋಯಿಕೇರಿ, ಹಾಲೇರಿ, ಕಾಂಡನಕೊಲ್ಲಿ, ಸುಂಟಿಕೊಪ್ಪ, ಬಾಳೆಕಾಡು, ಮಡಿಕೇರಿ, ಹೊರೂರು ಸೇರಿದಂತೆ ಹೊರಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಧಾರ್ಮಿಕ ಕಾರ್ಯಗಳನ್ನು ಭಕ್ತಿಯಿಂದ ಉಪಸ್ಥಿತರಿದ್ದರು.