ವೀರಾಜಪೇಟೆ, ಮಾ. ೧೬: ಹೆಣ್ಣು ಮಕ್ಕಳು ಶಿಕ್ಷಣವಂತ ರಾಗಬೇಕು ಮಹಿಳೆಯರಿಗೆ ಇರುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಪ್ರತಿಮನೆಯಲ್ಲಿಯೂ ಹೆಣ್ಣು ಮಕ್ಕಳನ್ನು ಗೌರವಿಸು ವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ನಿರ್ಮಲಗಿರಿ ‘ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ನಿವೃತ್ತ ಅಧಿಕಾರಿ ಕೆ.ಕೆ. ರಮಿತ ಅವರಿಗೆ ಸನ್ಮಾನ ಸಮಾರಂಭ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗ್ರಾಮದಲ್ಲಿ ಕೊರೋನ ಸಂದರ್ಭ ಆಸ್ಪತ್ರೆಗೆ ತೆರಳಲು ಮತ್ತು ಲಸಿಕೆ ಹಾಕಿಸಿಕೊಳ್ಳಲು ಅಧಿಕಾರಿ ರಮಿತ ಅವರು ಜನರಿಗೆ ಸಾಕಷ್ಟು ಸಹಕಾರ ಮಾಡಿದ್ದಾರೆ. ಸರಕಾರಿ ಕೆಲಸದ ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು ಜನರ ಸೇವೆಯನ್ನು ಉತ್ತಮವಾಗಿ ಮಾಡಿದಾಗ ನಿವೃತ್ತರಾದ ಬಳಿಕ ಅಂತವರನ್ನು ಜನರು ನೆನಪಿಸಿಕೊಂಡು ಒಳ್ಳೆಯದನ್ನು ಬಯಸುತ್ತಾರೆ. ಕರ್ತವ್ಯದಲ್ಲಿ ಒಳ್ಳೆತನವನ್ನು ಉಳಿಸಿಕೊಳ್ಳುವುದು ಉತ್ತಮ ಎಂದರು.

ಗ್ರಾಮಸ್ಥರಿAದ ಸನ್ಮಾನ ಸ್ವೀಕರಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷ ನಿವೃತ್ತ ಅಧಿಕಾರಿ ಕೆ.ಕೆ. ರಮಿತ ಅವರು ಮಾತನಾಡಿ ಆರೋಗ್ಯ ಇಲಾಖೆ ತಾಯಿಯಿದ್ದಂತೆ. ಸುಮಾರು ೩೮ ವರ್ಷಗಳ ಹಿಂದೆ ಕರ್ತವ್ಯದಲ್ಲಿ ಹೆಗ್ಗಳ ಗ್ರಾಮಕ್ಕೆ ಬಂದ ಸಂದರ್ಭ ಭಾರಿ ಮಳೆ ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಿಗೆ ಕಾಡು ದಾರಿಯಲ್ಲಿ ನಡೆದು ಮಕ್ಕಳಿಗೆ ಲಸಿಕೆ ನೀಡಲು ಬಹಳ ಶ್ರಮ ವಹಿಸಿದ್ದೇನೆ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಾಗ ಗ್ರಾಮದ ಎಲ್ಲಾ ಮನೆಗಳಿಗೂ ನಾನು ಭೇಟಿ ಮಾಡಿದ್ದ ಕಾರಣ ನನ್ನ ಸೇವೆಯನ್ನು ಮೆಚ್ಚಿ ೩೦ ವರ್ಷದ ಹಿಂದೆ ಪ್ರಶಸ್ತಿ ನೀಡಿದ್ದರು, ನಂತರ ನನ್ನ ಕರ್ತವ್ಯವನ್ನು ಮನಸ್ಪೂರ್ತಿಯಿಂದ ಮುಂದುವರಿಸಿ ಅಂದು ತಾಲೂಕು ಆರೋಗ್ಯ ಅಧಿಕಾರಿ ಯತಿರಾಜ್ ಅವರ ಸಮ್ಮುಖದಲ್ಲಿ ನನ್ನ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರ ಚಿನ್ನದ ಪದಕ ನೀಡಿ ಗೌರವಿಸಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊAಡರು.

ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ರೀತಾ ವಿಠಲ್, ವೀರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ರವೀಂದ್ರ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ದಿನೇಶ್ ಬೋಪಣ್ಣ, ಅಭಿವೃದ್ಧಿ ಅಧಿಕಾರಿ ಮಣಿ, ಸದಸ್ಯೆ ಲಕ್ಷಿö್ಮ, ಗ್ರಾ.ಪಂ. ಮಾಜಿ ಅಧ್ಯಕ್ಷ ಪೋರೆರ ಬಿದ್ದಪ್ಪ, ಗೋಣಿಕೊಪ್ಪಲು ವರ್ತುಲನ ಸಂಘಟನೆಯ ಕಾರ್ಯದರ್ಶಿ ನಳಿನಾಕ್ಷಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹೆಗ್ಗಳ ಗ್ರಾಮದ ರಸ್ತೆ ಬದಿ ಇತರೆಡೆಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಬರುತ್ತಿರುವ ಗ್ರಾಮದ ಜನಾರ್ಧನ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ವಿಧ್ಯಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ೨೬ ಅಂಗನವಾಡಿ ಕೇದ್ರದ ಕಾರ್ಯಕರ್ತೆಯರು, ಸಂಜೀವಿನಿ ಸಂಘ, ಸಮುದಾಯ ಅರೋಗ್ಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ನಿರ್ಮಲಗಿರಿ ಅಂಗನವಾಡಿ ಕಾರ್ಯಕರ್ತೆ ಸೌಮ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಅಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.