ಮಡಿಕೇರಿ, ಮಾ. ೧೬: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ಮತ್ತು ವಡ್ಡರಮಾಡು ಭಾಗಗಳ ಜನವಸತಿ ಪ್ರದೇಶಗಳ ಮನೆ ಮನೆಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ‘ಮನೆ ಮನೆಗೆ ಗಂಗೆ’ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಜಂಟಿ ಸರ್ವೆ ಕಾರ್ಯನಡೆಸಿ, ಗುತ್ತಿಗೆದಾರರು ಎರಡು ವರ್ಷಗಳ ಹಿಂದೆಯೇ ಕೆಲಸ ಆರಂಭಿಸಿದ್ದು ಟೆಂಡರ್ ಅವಧಿ ಮುಗಿದಿದ್ದರೂ ಕಾಮಗಾರಿಯು ಸರ್ವೆಕಾರ್ಯ ನಡೆಸಿದ ಜನವಸತಿ ಪ್ರದೇಶಗಳಿಗೆ ಪೈಪ್ಲೈನ್ ವಿಸ್ತರಣೆಯಾಗದೆ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಪ್ರಸ್ತುತ ಗ್ರಾಮ ಪಂಚಾಯತಿಯಿAದ ನೀರು ಸರಬರಾಜು ವ್ಯವಸ್ಥೆ ಇರುವಲ್ಲಿ ಕೆಲವೊಂದು ಟ್ಯಾಪ್ಗಳನ್ನು ಅಳವಡಿಸಿದ್ದನ್ನು ಬಿಟ್ಟರೆ ಯಾವುದೇ ರೀತಿಯಲ್ಲಿ ಕಾಮಗಾರಿಯಲ್ಲಿ ಪ್ರಗತಿ ಕಂಡಿಲ್ಲ ಎಂದು ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆರೋಪಿಸಿದ್ದಾರೆ.
ಬೆಂಡೆಕುತ್ತಿ ಹಾಡಿ, ಬೆಂಡೆಕುತ್ತಿ ಕೆರೆಹಾಡಿ, ಚಿಣ್ಣನಹಾಡಿ, ದಾಳಿಂಬೆ ಹಾಡಿ, ವಡ್ಡರಮಾಡು ಪೈಸಾರಿ ಭಾಗದ ಗಿರಿಜನ ವಸತಿ ಕೇಂದ್ರಿತ ಪ್ರದೇಶಗಳ ಮನೆಗಳಿಗೆ ಈ ವರೆಗೂ ಪೈಪ್ಲೈನ್ಗಳನ್ನು ಅಳವಡಿಸದಿರುವ ಬಗ್ಗೆ ಮತ್ತು ಇಪ್ಪತ್ತು ಸಾವಿರ ಲೀಟರ್ ನೀರು ತುಂಬಿಸಲು ನಿರ್ಮಾಣ ಮಾಡಿದ ಎರಡು ಸಿಮೆಂಟ್ ಟ್ಯಾಂಕ್ಗಳಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದಲ್ಲದೆ ಟ್ಯಾಂಕ್ ಸ್ವಲ್ಪ ಮಟ್ಟಿಗೆ ಒಂದು ಕಡೆಗೆ ವಾಲಿದ ಹಾಗೆ ಕಾಣುತ್ತಿದ್ದು ಗುತ್ತಿಗೆದಾರರು ಬಿರುಕು ಕಾಣಿಸಿಕೊಂಡ ಭಾಗಕ್ಕೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿರುವುದು ಗೋಚರವಾಗಿದೆ.
ಟ್ಯಾಂಕ್ ಪಕ್ಕದಲ್ಲೇ ಶಾಲೆಗಳಿದ್ದು ಟ್ಯಾಂಕ್ ಕುಸಿದರೆ ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಗುತ್ತಿಗೆದಾರರ ಮೇಲೆ ಕ್ರಮಕೈಗೂಂಡು ಜಿಲ್ಲಾಡಳಿತದ ವತಿಯಿಂದ ಸ್ಥಳ ಪರಿಶೀಲನೆ ನಡೆಸಿ ಅಪಾಯದ ಅಂಚಿನಲ್ಲಿರುವ ಟ್ಯಾಂಕ್ಗಳನ್ನು ಕೆಡವಿ ಹೊಸ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಸ ಬೇಕೆಂದು ಹಾಗೂ ಈ ಕಾಮಗಾರಿಗೆ ಗ್ರಾಮ ಸಭೆಯಲ್ಲಿ ಯಾವುದೇ ಅನುಮೋದನೆ ನೀಡಲು ಸಾಧ್ಯವಿಲ್ಲ ಹಾಗೂ ಕಾಮಗಾರಿಯ ಸೂಚನ ಫಲಕದಲ್ಲಿ ಗುತ್ತಿಗೆದಾರರ ಏಜನ್ಸಿ ಹೆಸರನ್ನು ಅಳಿಸಿ ಕಾಣದಂತೆ ಮಾಡಿರುವುದು ಸಂಶಯಗಳಿಗೆ ಎಡೆಮಾಡಿದೆ.
ಅತಿ ಶೀಘ್ರದಲ್ಲೇ ಈ ಕಾಮಗಾರಿಯ ವಿಚಾರದಲ್ಲಿ ಗ್ರಾಮಸಭೆ ನಡೆಸುತ್ತೇವೆಂದು ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮ್ಮುಣಿ ಬೆಂಡೆಕುತ್ತಿ ಮತ್ತು ಉಪಾಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣನವರು ಸ್ಥಳ ಪರಿಶೀಲನೆ ನಡೆಸಿ ಅಗ್ರಹಿಸಿದರು. ಗಿರಿಜನ ಮುಖಂಡರಾದ ಜೆ. ಕೆ. ವಿಜಯರವರು ಮನೆ ಮನೆಗಳಿಗೆ ನೀರು ಸರಬರಾಜಿನ ವ್ಯವಸ್ಥೆಯಾದರೆ ಕಾರ್ಮಿಕ ವರ್ಗದ ಮಹಿಳೆಯರಿಗೆ ಅನುಕೂಲವಾಗಲಿದ್ದು ಕಳಪೆ ಕಾಮಗಾರಿಯಲ್ಲಿ ಭಾಗಿಯಾದ ಗುತ್ತಿಗೆದಾರರ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಬೇಸಿಗೆಯ ತಾಪಮಾನ ಹೆಚ್ಚಾಗಿ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು ಮನೆ ಮನೆಗಳಿಗೆ ನೀರು ಪೂರೈಕೆ ವ್ಯವಸ್ಥೆ ಅತಿ ಶೀಘ್ರದಲ್ಲೇ ಜೋಡಣೆ ಮಾಡಬೇಕೆಂದು ಅಗ್ರಹಿಸಿದರು.