ಸೋಮವಾರಪೇಟೆ, ಮಾ. ೧೫: ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಭಾರತೀಯ ಜನತಾ ಪಾರ್ಟಿ ಸರ್ಕಾರ ಜಿಲ್ಲೆಗೆ ನೀಡಿದ ಕೊಡಗು ವಿಶ್ವ ವಿದ್ಯಾನಿಲಯವನ್ನು ಅನುದಾನದ ಕೊರತೆಯ ನೆಪವೊಡ್ಡಿ ರದ್ದು ಪಡಿಸಲು ಹುನ್ನಾರ ನಡೆಸಿದೆ. ಇದರೊಂದಿಗೆ ಜಿಲ್ಲೆಯ ರೈತರು ಹಾಗೂ ಎಸ್.ಸಿ. ಎಸ್.ಟಿ. ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ತಾ. ೧೭ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ. ವಿಶ್ವ ವಿದ್ಯಾಲಯವನ್ನು ವಿಲೀನಗೊಳಿಸುವ ಯತ್ನದ ಹಿಂದೆ ವಿ.ವಿ.ಯನ್ನು ರದ್ದುಪಡಿಸುವ ಹುನ್ನಾರ ನಡೆಸಿದೆ. ಇದರೊಂದಿಗೆ ಜಿಲ್ಲೆಯ ರೈತಾಪಿ ಜನರಿಗೆ ಮಾರಕವಾಗಿರುವ ಸಿ & ಡಿ ಜಮೀನನ್ನು ರೈತರಿಂದ ಕಿತ್ತು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಯತ್ನಿಸುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ರೂ. ೨೫,೦೦೦ ಕೋಟಿ ಅನುದಾನವನ್ನು ಉಚಿತ ಭಾಗ್ಯಗಳ ಬಳಕೆಗೆ ಬಳಸಿದೆ. ಇವುಗಳನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಲಿದೆ ಎಂದು ಅಧ್ಯಕ್ಷ ಮಹೇಶ್ ತಿಮ್ಮಯ್ಯ ತಿಳಿಸಿದ್ದಾರೆ. ಈ ಬಾರಿಯ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ದಲಿತ ಮತ್ತು ಹಿಂದುಳಿದ ವರ್ಗದವರನ್ನು ಕಡೆಗಣಿಸಿ ಅಲ್ಪಸಂಖ್ಯಾತರಿಗೆ ಮಾತ್ರ ಅತೀ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ತಾರತಮ್ಯ ಎಸಗಿದೆ. ಇಂತಹ ಜನವಿರೋಧಿ ನೀತಿ ಖಂಡಿಸಿ ತಾ.೧೭ ರಂದು ಸೋಮವಾರಪೇಟೆಯ ಜೇಸಿ ವೇದಿಕೆಯಲ್ಲಿ ಸತ್ಯಾಗ್ರಹ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸತ್ಯಾಗ್ರಹದಲ್ಲಿ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಗೋಣಿಕೊಪ್ಪದಲ್ಲಿ

*ಗೋಣಿಕೊಪ್ಪಲು: ದಲಿತ ಅಭಿವೃದ್ಧಿಗೆ ಮೀಸಲಿರಿಸಿದ ಎಸ್.ಸಿ, ಎಸ್.ಟಿಪ್, ಟಿ.ಎಸ್.ಪಿ ಯೋಜನೆಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ವೀರಾಜಪೇಟೆ ಮಂಡಳ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ತಿಳಿಸಿದ್ದಾರೆ. ಈ ವಿಚಾರವಾಗಿ ಮಾಹಿತಿ ನೀಡಿದ ಅವರು ತಾ. ೧೭ ರಂದು ಬೆಳಿಗ್ಗೆ ೧೦:೩೦ಕ್ಕೆ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಗುವುದು.

ಕೊಡಗು ವಿಶ್ವವಿದ್ಯಾಲಯ ಮುಚ್ಚುವ ವಿಚಾರವಾಗಿ ಸರ್ಕಾರ ತೆಗೆದುಕೊಂಡ ಜನವಿರೋಧಿ ನಿರ್ಧಾರವನ್ನು ವಿರೋಧಿಸಿ, ಸಿ ಅ್ಯಂಡ್ ಡಿ ಲ್ಯಾಂಡ್ ಜಾಗವನ್ನು ಸರ್ಕಾರಕ್ಕೆ ಮರಳಿಸುವ ವಿಚಾರವನ್ನು ಮುಂದಿಟ್ಟು ಮತ್ತು ಅಭಿವೃದ್ದಿ ಕಾರ್ಯಗಳಲ್ಲಿ ಶೂನ್ಯ ನಡೆಯ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.