ಐಸಿಸ್ ನಾಯಕನ ಹತ್ಯೆ

ಬಾಗ್ದಾದ್ ಮಾ. ೧೫: ಇರಾಕ್ ಮತ್ತು ಸಿರಿಯಾಗೆ ‘ಇಸ್ಲಾಮಿಕ್ ಸ್ಟೇಟ್' ಸಂಘಟನೆಯ ನಾಯಕನಾಗಿದ್ದ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಶುಕ್ರವಾರ ಹೇಳಿದ್ದಾರೆ. ಹತ್ಯೆಯಾದ ಉಗ್ರ, ಇರಾಕ್ ಮತ್ತು ವಿಶ್ವದ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದ್ದ ಎಂದೂ ಉಲ್ಲೇಖಿಸಿದ್ದಾರೆ. ಅಬು ಖದೀಜಾ ಎಂದೂ ಕರೆಯಲಾಗುತ್ತಿದ್ದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರುಫಾಯಿ ಎಂಬಾತನನ್ನು, ‘ಇಸ್ಲಾಮಿಕ್ ಸ್ಟೇಟ್' ವಿರುದ್ಧ ಹೋರಾಡುತ್ತಿರುವ ಅಮೇರಿಕಾ ಪಡೆಗಳ ಬೆಂಬಲದೊAದಿಗೆ ಇರಾಕ್ ಸೇನೆ ಹೊಡೆದುರುಳಿಸಿದೆ ಎಂದು ಸುಡಾನಿ ತಿಳಿಸಿದ್ದಾರೆ. ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಭಾವ ಹೊಂದಿರುವ ಈ ಸಂಘಟನೆಯು, ಮಧ್ಯಪ್ರಾಚ್ಯ, ಏಷ್ಯಾದಲ್ಲಿ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಈ ಸಂಘಟನೆಯ ನಾಯಕನಾಗಿದ್ದ ಅಬು ಬಕರ್ ಅಲ್-ಬಾಗ್ದಾದಿ, ಇರಾಕ್ ಮತ್ತು ಸಿರಿಯಾದ ಕಾಲುಭಾಗದಷ್ಟು ಪ್ರದೇಶವನ್ನು ಕ್ಯಾಲಿಫೇಟ್ ಎಂದು ೨೦೧೪ರಲ್ಲಿ ಘೋಷಿಸಿದ್ದ. ಬಾಗ್ದಾದಿಯನ್ನು ೨೦೧೯ರಲ್ಲಿ ವಾಯವ್ಯ ಸಿರಿಯಾದಲ್ಲಿ ಯುಎಸ್ ವಿಶೇಷ ಪಡೆಗಳು ಹತ್ಯೆ ಮಾಡಿದ್ದವು. ಅದಾದನಂತರ, ಸಂಘಟನೆಯ ಸಾಮರ್ಥ್ಯ ಕುಸಿಯಲಾರಂಭಿಸಿತ್ತು.

೬೪ ಮಾವೋವಾದಿಗಳು ಶರಣು

ಹೈದರಾಬಾದ್, ಮಾ. ೧೫: ತೆಲಂಗಾಣದ ಭದ್ರಾದ್ರಿ ಕೊಠಗುಡಂ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಒಟ್ಟು ೬೪ ಸದಸ್ಯರು ಶನಿವಾರ ಜಿಲ್ಲಾ ಪೊಲೀಸರ ಮುಂದೆ ಶರಣಾಗಿದ್ದಾರೆ. ಛತ್ತೀಸಗಢ ಮತ್ತು ತೆಲಂಗಾಣದ ಗಡಿ ಗ್ರಾಮಗಳ ಪ್ರದೇಶ ಸಮಿತಿ ಸದಸ್ಯ ಸೇರಿದಂತೆ ವಿವಿಧ ಕೇಡರ್‌ಗಳಿಗೆ ಸೇರಿದ ೬೪ ಮಂದಿ ಮಾವೋವಾದಿಗಳು ನಕ್ಸಲ್‌ವಾದದ ಹಾದಿಯನ್ನು ತ್ಯಜಿಸಿ ತಮ್ಮ ಕುಟುಂಬಗಳೊAದಿಗೆ ಶಾಂತಿಯುತ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದು ಶರಣಾದ ೬೪ ಸದಸ್ಯರು ಸೇರಿದಂತೆ ಕಳೆದ ಎರಡೂವರೆ ತಿಂಗಳಿನಲ್ಲಿ ಒಟ್ಟು ೧೨೨ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಭದ್ರಾದ್ರಿ ಕೊಠಗುಡಂ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾ ವಾಯು ರಕ್ಷಣಾ ವಲಯ ಪ್ರವೇಶಿಸಿದ ರಷ್ಯಾ ಯುದ್ಧ ವಿಮಾನಗಳು

ಸಿಯೊಲ್, ಮಾ. ೧೫: ರಷ್ಯಾದ ಹಲವು ಯುದ್ಧ ವಿಮಾನಗಳು ನಮ್ಮ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ದಕ್ಷಿಣ ಕೊರಿಯಾ ಸೇನೆ ಶನಿವಾರ ಆರೋಪಿಸಿದೆ. ದಕ್ಷಿಣ ಕೊರಿಯಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಗುರುತಿಸಲಾಗಿರುವ ವಾಯು ರಕ್ಷಣಾ ವಲಯಕ್ಕೆ ರಷ್ಯಾದ ಹಲವು ಮಿಲಿಟರಿ ವಿಮಾನಗಳು ಪ್ರವೇಶಿಸಿದ್ದವು. ಸ್ವಲ್ಪಹೊತ್ತಿನ ನಂತರ ತೆರಳಿವೆ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನಗಳು ಮುಂದುವರಿದಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿರುವುದು ದಕ್ಷಿಣ ಕೊರಿಯಾದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ರಷ್ಯಾ ವಿಮಾನಗಳಿಂದ ವಾಯು ವಯಲದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ದಕ್ಷಿಣ ಕೊರಿಯಾ ಸೇನೆ ಸ್ಪಷ್ಟಪಡಿಸಿದೆ.