ಸೋಮವಾರಪೇಟೆ, ಮಾ. ೧೫: ಕಾಂಚನಗAಗಾ ಕ್ರೀಡಾ ಸಂಘ ಬಳಗುಂದ ಮತ್ತು ತಾಲೂಕು ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಬೇಸಿಗೆ ಹಾಕಿ ಶಿಬಿರ ಏ.೧ ರಿಂದ ೨೦ ರವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಸಿಂಥೆಟಿಕ್ ಹಾಕಿ ಟರ್ಫ್ನಲ್ಲಿ ನಡೆಯಲಿದೆ ಎಂದು ಕ್ರೀಡಾ ಸಂಘದ ಉಪಾಧ್ಯಕ್ಷ ಅಂತೋಣಿ ಡಿಸೋಜ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಶಿಬಿರವನ್ನು ನಡೆಸಲಾಗುತ್ತದೆ. ಸೋಮವಾರಪೇಟೆಯ ಅನೇಕ ಹಾಕಿ ಅಟಗಾರರು ಭಾರತ ತಂಡವನ್ನು ಪ್ರತಿನಿಧಿಸಿ ತಾಲೂಕು ಮತ್ತು ದೇಶಕ್ಕೂ ಕೀರ್ತಿ ತಂದಿದ್ದಾರೆ ಎಂದು ಹೇಳಿದರು. ಬೆಳಿಗ್ಗೆ ೬.೩೦ ರಿಂದ ೯ ರ ತನಕ ತರಬೇತಿ ನಡೆಯಲಿದೆ. ಎನ್‌ಐಎಸ್ ತರಬೇತುದಾರರು ತರಬೇತಿ ನೀಡಲಿದ್ದಾರೆ. ಮಕ್ಕಳಿಗೆ ಹಾಲು, ಮೊಟ್ಟೆಯನ್ನು ವಿತರಿಸಲಾಗುತ್ತದೆ. ಶಿಬಿರದಲ್ಲಿ ತರಬೇತಿ ಪಡೆದ ಪ್ರತಿಭಾವಂತರನ್ನು ಗುರುತಿಸಿ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಗುವುದು ಎಂದು ಹೇಳಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಪ್ರಾಥಮಿಕ ಹಾಗು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಕೊಡಗಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡಾಕ್ಷೇತ್ರದಲ್ಲೂ ಉತ್ತಮ ಹುದ್ದೆಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ಕ್ರೀಡಾ ಸಂಘದ ಅಧ್ಯಕ್ಷ ಟಿ.ಪಿ. ಚಂಗಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ನಂದಕುಮಾರ್, ತರಬೇತುದಾರ ಬಿ.ಎಸ್. ಸುರೇಶ್ ಇದ್ದರು.