ಶಾಸಕ ಡಾ. ಮಂತರ್ ಗೌಡ

ನಾಪೋಕ್ಲು, ಮಾ. ೧೫: ಗ್ರಾಮಸ್ಥರು ತಮ್ಮ ಹಕ್ಕುಗಳಿಗಾಗಿ ಅರ್ಥಪೂರ್ಣ ಹೋರಾಟ ನಡೆಸಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆ ಹಾಗೂ ನಿವೇಶನದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ಜನರು ತಮ್ಮ ಅವಶ್ಯಕತೆಗಳಿಗಾಗಿ ಪ್ರತಿಭಟನೆ, ಹೋರಾಟ ನಡೆಸುವುದು ಸಾಮಾನ್ಯ. ಗ್ರಾಮದ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಸೂಕ್ತವಾಗಿ ಪರಿಹರಿಸಲಾಗುವುದು. ಅದು ಬಿಟ್ಟು ಸ್ಥಳೀಯ ನಿವಾಸಿಗಳು ಚುನಾವಣೆ ಬಹಿಷ್ಕಾರದಂತಹ ಕಾರ್ಯಕ್ಕೆ ಮುಂದಾಗಬಾರದು ಎಂದರು. ಗ್ರಾಮಮಟ್ಟದ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುತ್ತಾರೆ. ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ದಾರಿ ಇರುತ್ತದೆ. ಅಧಿಕಾರಿ ವರ್ಗದವರು ಕಾಳಜಿಯಿಂದ ಇಚ್ಛಾಶಕ್ತಿಯಿಂದ ಜನರ ಕೆಲಸವನ್ನು ನಿರ್ವಹಿಸಿದರೆ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದರು. ನಿವೇಶನ ರಹಿತರಿಗೆ ಕಂದಾಯ ಇಲಾಖೆಯ ಮೂಲಕ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದ ಅವರು; ಯಾವುದೇ ಕಾರಣಕ್ಕೂ ಯಾರಿಗೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಡಿ. ಯಾರಾದರೂ ಲಂಚದ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತನ್ನಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕರು ಸಾಕಷ್ಟು ವಿಶೇಷ ಅನುದಾನ ನೀಡಿದ್ದಾರೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದ್ದಾರೆ ಎಂದರು. ಅರಣ್ಯ ಇಲಾಖೆ ಅಧಿಕಾರಿಯವರು ಗ್ರಾಮಸಭೆಗೆ ಗೈರು ಹಾಜರಾದ ಕಾರಣ ಅವರಿಗೆ ನೋಟೀಸು ನೀಡುವಂತೆ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ಅಂಗನವಾಡಿ ಮಕ್ಕಳ ಸಂಖ್ಯೆ ಕೊರತೆ ಬಗ್ಗೆ ಹಾಗೂ ಪಾಲೆಮಾಡು ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು ಹಾಜರಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರಿಗೆ ಸಿಡಿಪಿಓ ಅವರಿಗೆ ಸ್ಥಳೀಯರ ವಿಶ್ವಾಸದಿಂದ ಸರಿಯಾಗಿ ಕರ್ತವ್ಯ ನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಗೆ ನಿರ್ದೇಶನ ನೀಡಲು ತಿಳಿಸಿದರು. ಪುನರ್ವಸತಿ ಯೋಜನೆಯಡಿ ಫಲಾನುಭವಿ ಬಿಲ್ಲವರ ಸಾವಿತ್ರಿ ಹಾಗೂ ಬಿ.ಡಿ. ರತಿ ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುದಾನ ಬಿಡುಗಡೆಯಾಗದೇ ಇರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಶಾಸಕರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ಸೂಚನೆ ನೀಡಿದರು.

ಗ್ರಾಮಸ್ಥರಾದ ಅಶ್ವಿನಿ ಅವರು ವಿದ್ಯುತ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಸೆಸ್ಕ್ ಮೂರ್ನಾಡು ಅಭಿಯಂತರರು ಪ್ರತಿಕ್ರಿಯಿಸಿ ವಿದ್ಯುತ್ ಕಡಿತ ಗೊಳಿಸದಂತೆ ಕ್ರಮವಹಿಸುವಂತೆ ತಿಳಿಸಿದರು.

ಕಂದಾಯ ಇಲಾಖೆಯ ಮೂಲಕ ಶಾಸಕರು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲು ೬೧ ಫಲಾನುಭವಿಗಳು, ವಸತಿ ಯೋಜನೆಯಡಿ ೧೨೮, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ೩೫ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆ ಮಾಡಲಾಯಿತು, ಮಹಾತ್ಮ ಗಾಂಧಿ ನರೇಗಾ ಯೋಜನೆ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು. ಈ ಸಂದರ್ಭ ಶಾಸಕ ಡಾ. ಮಂತರ್ ಗೌಡ ಹಾಗೂ ಅಧ್ಯಕ್ಷ ಹೆಚ್.ಎ. ಹಂಸ, ತಹಶೀಲ್ದಾರ್ ಪ್ರವೀಣ್ ಹಾಗೂ ಇನ್ನಿತರರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಮೊಣ್ಣಪ್ಪ ಹೊದ್ದೂರು, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಂ.ಬಿ. ಹಮೀದ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೌರಿರ ನಾಣಯ್ಯ (ನವೀನ್), ಕುಸುಮಾವತಿ, ಲಕ್ಷಿö್ಮ, ಟೈನಿ ಕಡ್ಲೆರ, ಚೌರೀರ ಅನಿತಾ, ತಹಶೀಲ್ದಾರ್ ಪ್ರವೀಣ್, ಕಾರ್ಯ ನಿರ್ವಹಣಾಧಿಕಾರಿ ಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಘು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸಿ.ಡಿ.ಪಿ.ಓ, ಕ್ಷೇತ್ರ ಶಿಕ್ಷಣಾಧಿಕಾರಿ, ಸೆಸ್ಕ್ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪಿಡಿಓ ಅಬ್ದುಲ್ಲಾ ಸ್ವಾಗತಿಸಿ, ಅಕ್ಷತಾ ಶೆಟ್ಟಿ ನಿರೂಪಿಸಿ, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.