ಕುಶಾಲನಗರ, ಮಾ.೧೪ : ಇತ್ತೀಚೆಗೆ ವಾಹನ ಅಪಘಾತದಲ್ಲಿ ಮೃತಪಟ್ಟ ಕುಶಾಲನಗರ ಪಟ್ಟಣದ ಕರಿಯಪ್ಪ ಬಡಾವಣೆ ನಿವಾಸಿ ಡಿ.ಎನ್. ಶಶಿ ಅವರ ಆತ್ಮಕ್ಕೆ ಶಾಂತಿ ಕೋರಿ ಬಡಾವಣೆ ನಿವಾಸಿಗಳ ಟ್ರಸ್ಟ್ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಕರಿಯಪ್ಪ ಬಡಾವಣೆ ನಿವಾಸಿಗಳ ಟ್ರಸ್ಟ್ ಅಧ್ಯಕ್ಷರಾದ ಎಂ.ಕೆ. ಹೇಮರಾಜು ಮತ್ತು ಉಪಾಧ್ಯಕ್ಷರು ಹಾಗೂ ಕುಶಾಲನಗರ ಪುರಸಭೆ ಸದಸ್ಯ ಎಂ.ಕೆ. ದಿನೇಶ್ ನಂದೀಶ್ ಮತ್ತಿತರರ ನೇತೃತ್ವದಲ್ಲಿ ಬಡಾವಣೆಯ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮೃತನ ಕುಟುಂಬ ಸದಸ್ಯರಿಗೆ ಸಹಾಯ ಹಸ್ತ ನೀಡುವ ಬಗ್ಗೆ ಚರ್ಚೆ ನಡೆಯಿತು.
ಮೃತರ ಓರ್ವ ಪುತ್ರನಿಗೆ ೧೦ನೇ ತರಗತಿ ತನಕ ಉಚಿತ ಶಿಕ್ಷಣ ನೀಡುವ ಬಗ್ಗೆ ಬಡಾವಣೆ ನಿವಾಸಿ ಒಬ್ಬರು ಮುಂದೆ ಬಂದಿದ್ದು, ಇನ್ನುಳಿದಂತೆ ಬಡಾವಣೆ ನಿವಾಸಿಗಳಿಂದ ಹಣ ಸಂಗ್ರಹಿಸಿ ನೀಡುವ ಬಗ್ಗೆಯೂ ಸಭೆ ಒಪ್ಪಿಗೆ ನೀಡಿತು.
ಈಗಾಗಲೇ ಬಡಾವಣೆ ನಿವಾಸಿಗಳಿಂದ ಅಂದಾಜು ೧.೫ ಲಕ್ಷ ರೂ ಹಣ ಸಂಗ್ರಹವಾಗಿದ್ದು ಇನ್ನು ಹೆಚ್ಚಿನ ಮೊತ್ತ ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಟ್ರಸ್ಟ್ ಉಪಾಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದರು.