ಮಡಿಕೇರಿ, ಮಾ. ೧೪: ಜಿಲ್ಲೆಯ ಮಡಿಕೇರಿ ನಗರದಲ್ಲಿ ಕಳೆದ ವಾರ ಅನಧಿಕೃತವಾಗಿ ಸ್ಕೀಂ ನಡೆಸುತ್ತಿದ್ದ ಐವರನ್ನು ಬಂಧಿಸಿ ಪೊಲೀಸ್ ಇಲಾಖೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆೆ.
ಇದೀಗ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಮತ್ತು ಜಿಎಸ್.ಟಿ ಪಾವತಿಸದೆ ನಡೆಸುತ್ತಿರುವ ಸ್ಕೀಂ ಹಾಗೂ ಲಕ್ಕಿ ಕೂಪನ್‌ಗಳ ಸಂಖ್ಯೆ ಯಥೇಚ್ಛವಾಗಿ ಹೆಚ್ಚಳವಾಗಿದೆ.
ಕೋವಿಡ್ ಬಳಿಕ ಜಿಲ್ಲೆಯಲ್ಲಿ ಸ್ಕೀಂ ಮತ್ತು ಇತ್ತೀಚಿನ ಎರಡು ವರ್ಷಗಳಲ್ಲಿ ಲಕ್ಕಿ ಕೂಪನ್ ಬಂಪರ್ ಬಹುಮಾನಗಳ ಹೆಸರಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ಮೋಸಹೋಗಿದ್ದಾರೆ.
ಆದರೆ ಯಾವುದೇ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ.
ಸ್ಕೀಂ ಹೆಸರಿನಲ್ಲಿ ವಂಚಿಸಿ, ಗ್ರಾಹಕರಿಗೆ ಯಾವುದೇ ವಸ್ತುಗಳನ್ನು ಮತ್ತು ಹಣವನ್ನು ನೀಡದ ಘಟನೆ ಕಳೆದ ಒಂದು ತಿಂಗಳ ಹಿಂದೆ ಕುಶಾಲನಗರದಲ್ಲಿ ನಡೆದಿತ್ತು.
ಮೋಸ ಹೋದವರು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದರೂ, ಕೂಡ ಸ್ಕೀಂ ನಡೆಸುತ್ತಿದ್ದ ಮಾಲೀಕನನ್ನು ಇದುವರೆಗೆ ಬಂಧಿಸಿಲ್ಲ.
ಮಧ್ಯಮ ವರ್ಗದವರೇ ಟಾರ್ಗೆಟ್!
ಜಿಲ್ಲೆಯಲ್ಲಿ ಚಿಕ್ಕಪುಟ್ಟ ಹೋಂ ಅಪ್ಲೈನ್ಸಸ್ ನಡೆಸುತ್ತಾ ಹಲವು ವರ್ಷಗಳಿಂದ ಸರ್ಕಾರದಿಂದ ಅನುಮತಿ ಪಡೆದು ಸ್ಕೀಂ ನಡೆಸುತ್ತಾ ಬರುವ ಹಲವು ಮಂದಿ ಸಣ್ಣಪುಟ್ಟ ವ್ಯಾಪಾರಿಗಳು ಇದ್ದಾರೆ.
ಆದರೆ ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಸ್ಕೀಂ ಮತ್ತು ಲಕ್ಕಿಕೂಪನ್ ಡ್ರಾ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರವನ್ನು ಸರ್ಕಾರದಿಂದ ಅನುಮತಿ ಪಡೆಯದೇ ನಡೆಸುತ್ತಿದ್ದಾರೆ.
ಸ್ಕೀಂ ಮತ್ತು ಲಕ್ಕಿ ಕೂಪನ್ ನಡೆಸುವವರ ಟಾರ್ಗೆಟ್ ಮಧ್ಯಮ ವರ್ಗದವರು. ದಿನನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿರುವ ಕಾರ್ಮಿಕರನ್ನು ಹೆಚ್ಚಾಗಿ ಸ್ಕೀಂನಲ್ಲಿ ಸೇರಿಸುತ್ತಿದ್ದಾರೆ.
ದೊಡ್ಡದೊಡ್ಡ ಆಸೆ ತೋರಿಸಿ ಸ್ಕೀಂಗೆ ಸೇರಿಸಿ, ಮುಕ್ತಾಯಗೊಂಡ ಬಳಿಕ ಯಾವುದೇ ವಸ್ತುಗಳನ್ನು ನೀಡದ ಘಟನೆಗಳು ಜಿಲ್ಲೆಯಲ್ಲಿ ಇದೆ. ಆದರೆ ಇದುವರೆಗೆ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಮೋಸ ಹೋದವರು ದೂರು ನೀಡಲು ಕೂಡ ಮುಂದಾಗುತ್ತಿಲ್ಲ.
ಒAದೇ ಬಾರಿ ನಗದು ಪಾವತಿಸಿ, ಬೃಹತ್ ಮನೆ ಬಹುಮಾನ!
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಲಕ್ಕಿ ಕೂಪನ್ ಹೆಸರಿನಲ್ಲಿ ಹಲವು ಬಂಪರ್ ಬಹುಮಾನಗಳನ್ನು ಆಯೋಜಿಸಲಾಗುತ್ತಿದೆ. ಕೇವಲ ಐದರಿಂದ -ಆರು ತಿಂಗಳು ಮಾತ್ರ ನಡೆಸುವ ಲಕ್ಕಿ ಕೂಪನ್‌ಗೆ ಕೇವಲ ಸಾವಿರ ರೂಪಾಯಿ ನಿಗದಿಪಡಿಸಿ ಜನರನ್ನು ಆಕರ್ಷಿಸುತ್ತಿದ್ದಾರೆ.
ಸಂಬAಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಲಕ್ಕಿ ಕೂಪನ್ ಬಂಪರ್ ಬಹುಮಾನಗಳನ್ನು ಪ್ರಾಯೋಜಿಸುತ್ತಿದ್ದಾರೆ.
ಜನರನ್ನು ಆಕರ್ಷಿಸಲು ಮತ್ತು ವಿಶ್ವಾಸವನ್ನು ಹೆಚ್ಚಿಸಲು ಸ್ಥಳೀಯ ಮಟ್ಟದ ಪ್ರಭಾವಿ ನಾಯಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಿ ಲಕ್ಕಿ ಕೂಪನ್ ಬಂಪರ್ ಬಹುಮಾನವನ್ನು ದೊಡ್ಡಮಟ್ಟದ ಕಾರ್ಯಕ್ರಮ ಮಾಡಿ ಲಾಂಚ್ ಮಾಡುತ್ತಿದ್ದಾರೆ.
ಪ್ರಥಮ ಬಹುಮಾನವಾಗಿ ಮನೆ, ಕಾರು, ಬೈಕ್, ಚಿನ್ನಾಭರಣಗಳು, ಐಫೋನ್, ಹೀಗೇ ನಾನಾ ಆಕರ್ಷಿತ ಬಹುಮಾನಗಳನ್ನು ಪ್ರಾಯೋಜಿಸಿ ಹಲವು ಲಕ್ಕಿ ಕೂಪನ್ ಬಂಪರ್ ಬಹುಮಾನಗಳು ನಡೆಸಲಾಗುತ್ತಿದೆ.
ಕೇವಲ ಸಾವಿರ ರೂ ಮತ್ತು ಐದು ತಿಂಗಳೊಳಗೆ ಡ್ರಾ ಆಗುವುದರಿಂದ ಜನರನ್ನು ಹೆಚ್ಚಾಗಿ ಲಕ್ಕಿ ಕೂಪನ್ ಕಡೆಗೆ ಸೇರುತ್ತಿದ್ದಾರೆ.
ಅದಲ್ಲದೇ ಒಂದು ವರ್ಷ ಎರಡು ವರ್ಷಕ್ಕೆ ನಡೆಯುವ ಸ್ಕೀಂಗಳಲ್ಲಿ ಕೂಡ ಪ್ರತೀ ಡ್ರಾ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ವಿವಿಧ ರಾಜಕೀಯ ಪಕ್ಷದ ಮುಖಂಡರನ್ನು ಆಹ್ವಾನಿಸಿ ಡ್ರಾ ನಡೆಸುತ್ತಿದ್ದಾರೆ.
ಇನ್ನೂ ಕೆಲವು ಕಡೆಗಳಲ್ಲಿ ಲಕ್ಕಿ ಕೂಪನ್ ಡ್ರಾದಲ್ಲಿ ಸಾವಿರ ರೂ ಅಥವಾ ಐದುನೂರು ರೂಪಾಯಿ ಪಾವತಿಸಿ ಆ ಹಣಕ್ಕೆ ಬೆಲೆಬಾಳುವ ವಸ್ತುಗಳನ್ನು ನೀಡಿ, ಅದರೊಂದಿಗೆ ಲಕ್ಕಿ ಕೂಪನ್ ನೀಡುತ್ತಿದ್ದಾರೆ.
ಇತ್ತೀಚೆಗೆ ಕುಶಾಲನಗರದಲ್ಲಿ ಸ್ಕೀಂ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಗ್ರಾಹಕರಿಗೆ ಬಹುಮಾನಗಳನ್ನು ನೀಡದೆ ವಂಚಿಸಿ ಊರುಬಿಟ್ಟಿರುವ ಪ್ರಕರಣದಲ್ಲಿ ಆತನನ್ನು ಇದುವರೆಗೆ ಬಂಧಿಸಿಲ್ಲ.
ಆದರೆ ವಂಚಿಸಿ ಊರು ಬಿಟ್ಟಿರುವವನು ಕುಶಾಲನಗರ ಭಾಗದಲ್ಲಿ ಎರಡನೇ ಸ್ಕೀಂ ನಡೆಸಲು ಸಿದ್ಧತೆ ನಡೆಸುತ್ತಿದ್ದ. ಎರಡನೇ ಸ್ಕೀಂನಲ್ಲಿ ಬಹುಮಾನವಾಗಿ ಮನೆಗಳನ್ನು ಘೋಷಣೆ ಮಾಡಿ ಸ್ಕೀಂ ಕಾರ್ಡ್ಗಳನ್ನು ಮುದ್ರಿಸಿದ್ದನು.
ಈ ಎರಡನೇ ಸ್ಕೀಂನಲ್ಲಿ ಕುಶಾಲನಗರ ಭಾಗದ ರೆಸಾರ್ಟ್ ಮಾಲೀಕ ಹಾಗೂ ಮತ್ತೊಬ್ಬ ವ್ಯಾಪಾರಿಯನ್ನು ಸೇರಿಸಿ, ನಡೆಸಲು ಸಿದ್ಧತೆ ನಡೆಸುತ್ತಿದ್ದನು. ೩೦೦ ಕ್ಕೂ ಹೆಚ್ಚು ಜನರಿಂದ ಸಾವಿರ ರೂ ಕೂಡ ಸಂಗ್ರಹಿಸಿ ಸ್ಕೀಂ ನಡೆಸಲು ಸಿದ್ಧತೆ ಮಾಡುತ್ತಿದ್ದ.
ಆದರೆ ಮೊದಲ ಸ್ಕೀಂನಲ್ಲಿ ಗ್ರಾಹಕರಿಗೆ ವಂಚಿಸಿ ಊರುಬಿಟ್ಟ ವಿಷಯ ತಿಳಿಯುತ್ತಿದ್ದಂತೆ, ಅವನೊಂದಿಗೆ ಸೇರಿ ಸ್ಕೀಂ ನಡೆಸಲು ಸಿದ್ಧತೆ ಮಾಡುತ್ತಿದ್ದ ಇಬ್ಬರು, ಸ್ಕೀಂಗೆ ಸೇರಿದ್ದ ೩೦೦ ಕ್ಕೂ ಅಧಿಕ ಜನರಿಗೆ ಹಣವನ್ನು ಹಿಂತಿರುಗಿಸಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಆದರೆ ಮೊದಲ ಸ್ಕೀಂನಲ್ಲಿ ಮೋಸ ಹೋದ ಜನರು ಹಣ ಕಳೆದುಕೊಂಡಿದ್ದಾರೆ. ಮಂಗಳೂರು ಮತ್ತು ಪುತ್ತೂರು ಭಾಗದ ಮಂದಿ ಕೂಡ ಕೊಡಗು ಜಿಲ್ಲೆಯಲ್ಲಿ ಸ್ಕೀಂ ಮತ್ತು ಲಕ್ಕಿಕೂಪನ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ.
ಕೇರಳ ಮಾದರಿಯಲ್ಲೇ ಕೊಡಗಿನಲ್ಲಿ ನಡೆಯುತ್ತಿರುವ ಲಕ್ಕಿ ಕೂಪನ್ ಬಂಪರ್ ಬಹುಮಾನಗಳು!
ಪಕ್ಕದ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರ್ನಾಲ್ಕು ತಿಂಗಳಿಗೆ ಸಾವಿರ, ಐದುನೂರು ಪಾವತಿಸಿ ಸಾವಿರಾರು ಮಂದಿಯನ್ನು ಸೇರಿಸಿ ಲಕ್ಕಿ ಕೂಪನ್‌ಗಳನ್ನು ನಡೆಸಲಾಗುತ್ತಿದೆ.
೨ಃಊಏ ಮನೆ, ಥಾರ್ ಜೀಪು, ಕಾರು, ಬೈಕ್, ಗೋಲ್ಡ್ ಕಾಯಿನ್ ಹೀಗೇ ಬಹುಮಾನಗಳನ್ನು ನೀಡುವ ಲಕ್ಕಿ ಕೂಪನ್ ಕೇರಳ ರಾಜ್ಯದ ವಿವಿಧ ಭಾಗಗಳಲ್ಲಿ ಯಥೇಚ್ಛವಾಗಿ ನಡೆಯುತ್ತಿದೆ.
ಕೇರಳದಲ್ಲಿ ಲಕ್ಕಿ ಕೂಪನ್ ಡ್ರಾದಲ್ಲಿ ಮೋಸಹೋದ ಹಲವು ಘಟನೆಗಳು ನಡೆದಿವೆ.
ಪಕ್ಕದ ಕೇರಳ ರಾಜ್ಯದಲ್ಲಿ ನಡೆಯುತ್ತಿದ್ದ ಲಕ್ಕಿ ಕೂಪನ್ ಡ್ರಾದಿಂದ ಪ್ರೇರೇಪಿತಗೊಂಡು ಇದೀಗ ಕೊಡಗು ಜಿಲ್ಲೆಯಲ್ಲಿ ಕೂಡ ಲಕ್ಕಿ ಕೂಪನ್ ಯಾವುದೇ ಅನುಮತಿ ಇಲ್ಲದೆ ನಡೆಸಲಾಗುತ್ತಿದೆ.
ಸ್ಕೀಂನಲ್ಲಿ ಒಂದು ಅಥವಾ ಎರಡು ವರ್ಷದಲ್ಲಿ ಹಣ ಪಾವತಿಸಿದವರಿಗೆ ಯಾವುದೇ ಬಹುಮಾನಗಳನ್ನು ಬಾರದಿದ್ದರೆ ಕೊನೆಯಲ್ಲಿ ಅವರು ಕಟ್ಟಿದ ಹಣದಲ್ಲಿ ಅವರಿಗೆ ಬೇಕಾದ ಗೃಹೋಪಯೋಗಿ ವಸ್ತುಗಳು ಖರೀದಿಸುವ ಅವಕಾಶಗಳನ್ನು ಕೆಲವೊಂದು ಪಾರದರ್ಶಕವಾಗಿ ನಡೆಯುತ್ತಿರುವ ಸ್ಕೀಂಗಳಲ್ಲಿ ನೀಡಲಾಗುತ್ತಿದೆ.
ಆದರೆ ಲಕ್ಕಿ ಕೂಪನ್ ಟಿಕೆಟ್ ಒಮ್ಮೆ ಐದು ನೂರು ಅಥವಾ ಸಾವಿರ ರೂ ಪಾವತಿಸಿ ಟಿಕೆಟ್ ಪಡೆದರೆ ಬಹುಮಾನ ಬಾರದಿದ್ದರೆ ಆತನ ಹಣ ಗೋವಿಂದ ಎಂದರೆ ತಪ್ಪಾಗಲಾರದು.
ಕಳೆದ ಒಂದು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ಲಕ್ಕಿ ಕೂಪನ್ ಡ್ರಾಗಳು ನಡೆಯುತ್ತಿದೆ, ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿರುವುದರಿAದ ಅನಧಿಕೃತವಾಗಿ ನಡೆಯುತ್ತಿರುವ ಸ್ಕೀಂ ಮತ್ತು ಲಕ್ಕಿ ಕೂಪನ್‌ಗಳಿಗೆ ಮುದ್ರೆಬೀಳುವ ಸಾಧ್ಯತೆ ಇದೆ.
Soಛಿiಚಿಟ ಮೀಡಿಯಾ Iಟಿಜಿಟueಟಿಛಿeಡಿ' ಮೂಲಕ ಪ್ರಚಾರ!
ಕೇರಳ ರಾಜ್ಯದಲ್ಲಿ ಲಕ್ಕಿ ಕೂಪನ್ ಅಥವಾ ಸ್ಕೀಂ ನಡೆಸುವವರು ಲಕ್ಷಾಂತರ ಫಾಲೋವರ್ಸ್ ಇರುವ ಸೋಷಿಯಲ್ ಮೀಡಿಯಾ Iಟಿಜಿಟueಟಿಛಿeಡಿ's ಅವರ ಮುಖಾಂತರ ಲಕ್ಕಿ ಕೂಪನ್ ಬಗ್ಗೆ ವೀಡಿಯೋವನ್ನು ಮಾಡಿಸಿ ಅವರ ಖಾತೆಯಲ್ಲಿ ಅಪ್ಲೋಡ್ ಮಾಡಿಸುತ್ತಾರೆ. ಆ ಮೂಲಕ ಲಕ್ಷಾಂತರ ಮಂದಿ ಲಕ್ಕಿ ಕೂಪನ್ ಪಡೆಯುತ್ತಾರೆ.
ಇದೇ ಮಾರ್ಗವನ್ನೇ ಕೊಡಗು ಜಿಲ್ಲೆಯಲ್ಲಿ ಲಕ್ಕಿ ಕೂಪನ್ ನಡೆಸುತ್ತಿರುವವರು ಅನುಸರಿಸಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚಿಗೆ ಲಾಂಚ್ ಆಗಿರುವ ಲಕ್ಕಿ ಕೂಪನ್ ಬಹುತೇಕ ವಿಡಿಯೋಗಳನ್ನು ಕೇರಳ ರಾಜ್ಯದ ಲಕ್ಷಾಂತರ ಫಾಲೋವರ್ಸ್ ಇರುವ Iಟಿಜಿಟueಟಿಛಿeಡಿ's ಪ್ರಚಾರ ಪಡಿಸಿದ್ದಾರೆ.
ಜಿಲ್ಲೆಗೆ ಆಗಮಿಸಿ ಕಾರು, ಬೈಕ್, ಬಹುಮಾನವಾಗಿ ನೀಡುವ ಮನೆಯ ಮುಂದೆ ನಿಂತು ವೀಡಿಯೋ ಮಾಡಿ ಹೊರರಾಜ್ಯ ಮತ್ತು ಜಿಲ್ಲೆಯ ಜನರನ್ನು ಲಕ್ಕಿ ಕೂಪನ್ ಟಿಕೆಟ್ ಪಡೆಯುವಂತೆ ಆಕರ್ಷಿಸುತ್ತಾರೆ.
ಸಾಮಾನ್ಯವಾಗಿ ಲಕ್ಷಗಟ್ಟಲೆ ಫಾಲೋವರ್ಸ್ ಇರುವ ಸೋಷಿಯಲ್ ಮೀಡಿಯಾ ಇನ್ಫ್ಲೆಸರ್ಸ್ ನಂಬಿ ಅವರ ಫಾಲೋವರ್ಸ್ ಟಿಕೆಟ್ ಪಡೆಯುತ್ತಿದ್ದಾರೆ.
ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಲಕ್ಕಿ ಕೂಪನ್ ಟಿಕೆಟ್ ಮೂಲಕ ಒಂದು ಕೋಟಿಯ ಬೆಲೆಬಾಳುವ ಮನೆಯನ್ನು ಪ್ರಥಮ ಬಹುಮಾನವಾಗಿ ನೀಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಒಂದು ಮಿಲಿಯನ್ ನಿಂದ ಹಿಡಿದು ಹತ್ತು ಮಿಲಿಯನ್‌ವರೆಗೆ ವೀಡಿಯೋ ರೀಚ್ ಆಗುವ Iಟಿಜಿಟueಟಿಛಿeಡಿ's ಒಂದು ವೀಡಿಯೋ ಮಾಡಲು ಲಕ್ಷಾಂತರ ರೂಪಾಯಿಯನ್ನು ಕೂಡ ಪಡೆಯುತ್ತಿದ್ದಾರೆ. ಇತ್ತೀಚಿಗೆ ಲಕ್ಕಿ ಕೂಪನ್ ಭಾಗವಾಗಿ ಜಿಲ್ಲೆಗೆ ಕೇರಳ ರಾಜ್ಯದ ಪ್ರಸಿದ್ಧ ಯೂಟ್ಯೂಬರ್ಸ್ ಹಾಗೂ ಇನ್ಸ÷್ಟಗ್ರಾಂ ಸ್ಟಾರ್‌ಗಳು ಬಂದಿದ್ದರು. ಕೊಡಗು ಜಿಲ್ಲೆಯಲ್ಲಿ ಕೂಡ ಸ್ಕೀಂ ಮತ್ತು ಲಕ್ಕಿ ಕೂಪನ್ ಪ್ರಚಾರ ಪಡೆಸುವ ಸೋಷಿಯಲ್ ಮೀಡಿಯಾ ಪ್ರಭಾವಿಗಳು ಇದ್ದಾರೆ.
ಕುಶಾಲನಗರದಲ್ಲಿ ಸ್ಕೀಂ ನಡೆಸಿ ಜನರಿಗೆ ಮೋಸ ಮಾಡಿ ಪರಾರಿಯಾಗಿರುವ ಮಂಗಳೂರು ಮೂಲದ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಎರಡನೇ ವೀಡಿಯೋ ಮಾಡಲು ಜಿಲ್ಲೆಯ ಇನ್ಸ÷್ಟಗ್ರಾಂ ಪ್ರಭಾವಿಯೊಬ್ಬರಿಗೆ ತಿಳಿಸಿದ್ದರು.
ಆ ವ್ಯಕ್ತಿ ವೀಡಿಯೋ ಮಾಡಿ ಸ್ಕೀಂ ಬಗ್ಗೆ ಪ್ರಚಾರ ಪಡೆಸಿದ್ದರು. ಆದರೆ ಸೋಷಿಯಲ್ ಮೀಡಿಯಾ ಪ್ರಭಾವಿಗೂ ಕೂಡ ಹಣ ನೀಡದೆ ವಂಚಿಸಿದ್ದಾನೆ. ಲಕ್ಕಿ ಕೂಪನ್ ಮತ್ತು ಸ್ಕೀಂ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಪ್ರಚಾರಪಡಿಸುವವರು ತಾವು ಪ್ರಚಾರ ಮಾಡುವ ಸ್ಕೀಂ ಅಥವಾ ಲಕ್ಕಿ ಕೂಪನ್ ಬಗ್ಗೆ ಸರ್ಕಾರದಿಂದ ಅನುಮತಿ ಪಡೆದಿದೆಯೇ ಎಂದು ವಿಚಾರಿಸದೆ ಹಣಕ್ಕಾಗಿ ವೀಡಿಯೋ ಮಾಡಿ, ಜನರನ್ನು ಮತ್ತಷ್ಟು ಮೋಸಕ್ಕೆ ತಳ್ಳುತ್ತಿದ್ದಾರೆ.
ಕೆಲವೊಂದು ಭಾಗಗಳಲ್ಲಿ ಲಕ್ಕಿ ಕೂಪನ್ ನಡೆಸುವವರು ಇಂತಿಷ್ಟು ಟಿಕೆಟ್ ಮಾರಾಟ ಮಾಡಿದರೆ ಕಮೀಷನ್ ರೂಪದಲ್ಲಿ ಕೆಲಸ ಮಾಡುವ ಏಜೆಂಟರುಗಳನ್ನು ಕೂಡ ನೇಮಕ ಮಾಡಿ ಗ್ರಾಹಕರನ್ನು ಸೇರಿಸುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಸ್ಕೀಂ ಮತ್ತು ಲಕ್ಕಿ ಕೂಪನ್ ಡ್ರಾಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಬ್ರೇಕ್ ಹಾಕಲು ನಿರ್ಧರಿಸಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ