ಮಡಿಕೇರಿ, ಮಾ. ೧೪: ಹೆಚ್ಚಾಗುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ಕುರಿತು ಸರಕಾರ ಕೈಗೊಂಡ ಕ್ರಮಗಳ ಕುರಿತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಧಾನಸಭಾ ಕಲಾಪದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ, ಕಾಡಾನೆಗಳು ಅರಣ್ಯದಿಂದ ಹೊರಬಾರದಂತೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಆನೆತಡೆ ಕಂದಕ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ೩೯೧.೮೩೨ ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನಡೆಸಲಾಗಿದೆ. ಆನೆ, ಚಿರತೆ ಕಾರ್ಯಪಡೆಗಳನ್ನು ರಚನೆ ಮಾಡಲಾಗಿದೆ.
ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳೊಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯದಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ಚೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ಸಂರಕ್ಷಣೆ, ಹುಲ್ಲು ಬೆಳೆಯುವ ಪ್ರದೇಶದಲ್ಲಿ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಲಾಗಿದೆ. ಕಾಡಾನೆಯ ತ್ವರಿತ ಕಾರ್ಯಾಚರಣೆಗೆ ೨೪ಘಿ೭ ನಿಯಂತ್ರಣ ಕೊಠಡಿ, ಕಾಡಾನೆ ಮಾಹಿತಿ ಸಂಗ್ರಹಿಸಲು ಮಾಹಿತಿ ಕೇಂದ್ರ, ವಯಸ್ಕ ಹೆಣ್ಣಾನೆ ಗುರುತಿಸಿ ರೇಡಿಯೋ ಕಾಲರ್ ಅಳವಡಿಕೆ, ಪುಂಡಾನೆಗಳನ್ನು ಸೆರೆ ಹಿಡಿದು ಶಿಬಿರಕ್ಕೆ ಸ್ಥಳಾಂತರ ಸೇರಿದಂತೆ ಇನ್ನಿತರ ಕ್ರಮಗಳನ್ನು ವಹಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.
ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನವಲನ ಗಮನಿಸಲು ‘ಡ್ಯಾಶ್ಬೋರ್ಡ್’ ತಯಾರಿಸಲಾಗಿದೆ. ‘ಅಡ್ವನ್ ಅಲರ್ಟ್ ಸಿಸ್ಟಂ’ ಮೂಲಕ ವನ್ಯಪ್ರಾಣಿಗಳ ಕುರಿತು ಗ್ರಾಮಸ್ಥರಿಗೆ ನೇರ ಸಂದೇಶ ಒದಗಿಸುವುದು, ಆಯ್ದ ಪ್ರದೇಶಗಳಲ್ಲಿ ‘ಎಐ’ ಆಧರಿತ ಕ್ಯಾಮರಗಳನ್ನು ಅಳವಡಿಸಿ ವನ್ಯಜೀವಿಗಳ ಚಲನವಲನ ಗಮನಿಸಲಾಗುತ್ತಿದೆ ಎಂದರು.
ಕಾಡು ಹಂದಿ ಹಾವಳಿ ತಪ್ಪಿಸಲು ಕೇರಳ ಮಾದರಿ ಕ್ರಮ
ರಾಜ್ಯದಲ್ಲಿ ಕಾಡುಹಂದಿ ಹಾವಳಿ ತಪ್ಪಿಸಲು ನೆರೆಯ ಕೇರಳ ಸರಕಾರದ ಮಾದರಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಂತರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬೆಳೆ ಹಾನಿ ಮಾಡುವ ಕಾಡುಹಂದಿಯನ್ನು ಪರವಾನಗಿ ಹೊಂದಿರುವ ಬಂದೂಕಿನಿAದ ಗುಂಡು ಹಾರಿಸಬಹುದಾಗಿದೆ ಅಥವಾ ಬೇಟೆಯಾಡಬಹುದಾಗಿದೆ. ಈ ಕಾಡುಹಂದಿಯನ್ನು ೨೪ ಗಂಟೆಯೊಳಗೆ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು, ಮಹಜರು ನಡೆಸಬೇಕು. ಸತ್ತ ಕಾಡುಹಂದಿಯನ್ನು ಮೂರು ಅಡಿ ಆಳದ ಗುಂಡಿಯಲ್ಲಿ ಸಮಾಧಿ ಮಾಡಬೇಕು, ಅತಿಕ್ರಮಣ ಪ್ರದೇಶದಲ್ಲಿ ಕಾಡುಹಂದಿಯನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.