ಸಿದ್ದಾಪುರ, ಮಾ. ೧೪: ಅತ್ತಿಮಂಗಲ ಸಮೀಪದ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಕಾಡಾನೆ ಸಾವನ್ನಪ್ಪಿರುವ ಘಟನೆಗೆ ಸಂಬAಧಿಸಿದAತೆ ಮೇರಿಲ್ಯಾಂಡ್ ಕಾಫಿ ತೋಟದ ವ್ಯವಸ್ಥಾಪಕ ಜೋಸೆಫ್ ಬಂಧನವನ್ನು ಖಂಡಿಸಿ ಅರಣ್ಯ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆ ಹಾಗೂ ಕಾರ್ಮಿಕ ಸಂಘಟನೆಗಳ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ ಆನೆ - ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳದ ಅರಣ್ಯ ಇಲಾಖೆಯು ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿರುವ ಘಟನೆಗೆ ಸಂಬAಧಿಸಿದAತೆ ಬಡ ಕಾರ್ಮಿಕನನ್ನು ಬಂಧಿಸಿದೆ. ಕಾಡಾನೆ ಸಾವನ್ನಪ್ಪಿರುವುದಕ್ಕೆ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದ ಅವರು, ಅರಣ್ಯ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲು ಮಾಡಬೇಕೇ ಹೊರತು ಕಾರ್ಮಿಕರ ಮೇಲೆ ಅಲ್ಲ ಎಂದರು.
ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕಾರ್ಮಿಕರು ಹಾಗೂ ರೈತರು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ರೈತರು ಬೆಳೆದ ಬೆಳೆಗಳು ಕಾಡಾನೆಗಳಿಂದ ನಾಶವಾಗಿ ಅಪಾರ ನಷ್ಟವನ್ನು ಅನುಭವಿಸುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ಕಾಡಾನೆ ಸಾವಿಗೆ ಕಾರ್ಮಿಕ ಜೋಸೆಫ್ ಕಾರಣ ಎಂದು ಆರೋಪಿಸಿ ಬಂಧಿಸಿರುವುದು ಖಂಡನೀಯ. ಕಾರ್ಮಿಕ ಜೋಸೆಫ್ ಮೇಲಿನ ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದರು.
ಕಾರ್ಮಿಕ ಮುಖಂಡ ರಮೇಶ್ ಮಾತನಾಡಿ, ಕಾರ್ಮಿಕರನ್ನು ಹಾಗೂ ರೈತರ ಬೆಳೆಗಳನ್ನು ರಕ್ಷಿಸಲು ಸಾಧ್ಯವಾಗದ ಅರಣ್ಯ ಇಲಾಖೆ ರೈತರು ಹಾಗೂ ಕಾರ್ಮಿಕರ ಮೇಲೆ ದರ್ಪ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್ ಬೋಪಯ್ಯ ಮಾತನಾಡಿ, ಮೇರಿಲ್ಯಾಂಡ್ ತೋಟದ ವ್ಯವಸ್ಥಾಪಕ ಜೋಸೆಫ್ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದಾಖಲು ಮಾಡಿರುವ ಮೊಕದ್ದಮೆ ಹಿಂಪಡೆಯಬೇಕೆAದು ಒತ್ತಾಯಿಸಿ ತಾ೧೮ರಂದು ಸಂಘಟನೆಗಳ ಮುಖಾಂತರ ಮಡಿಕೇರಿಯ ಅರಣ್ಯ ಭವನಕ್ಕೆ ತೆರಳಿ ಮನವಿ ನೀಡಲಾಗುವುದು ಹಾಗೂ ಪ್ರಕರಣವನ್ನು ಹಿಂಪಡೆಯಲು ಗಡುವು ನೀಡಲಾಗುವುದೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಚೊಟ್ರಮಾಡ ಸುಜಯ್ ಬೋಪಯ್ಯ, ಹಳಗದ್ದೆ ಮಾದಪ್ಪ, ಸಜೀವನ್, ಎನ್.ಡಿ. ಕುಟ್ಟಪ್ಪ, ಪುಚ್ಚಿಮಾಡ ಸುಭಾಶ್, ವಜ್ರ ಬೋಪಣ್ಣ, ನಾರಾಯಣ ಸೇರಿದಂತೆ ಕಾರ್ಮಿಕರು ಹಾಗೂ ಕಾಫಿ ಬೆಳೆಗಾರರು ಹಾಜರಿದ್ದರು.