ವೀರಾಜಪೇಟೆ, ಮಾ. ೧೩: ಎಲ್ಲರೂ ಸಾಹಿತಿಗಳಾಗದಿದ್ದರೂ ಚಿಂತೆಯಿಲ್ಲ ಆದರೆ ಶ್ರೀಮಂತವಾದ ಕನ್ನಡ ಸಾಹಿತ್ಯವನ್ನಾದರೂ ಓದಬೇಕು ಎಂದು ಗೋಣಿಕೊಪ್ಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಜಯಲಕ್ಷಿ÷್ಮ ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಬಿ.ಜಿ ರಘುನಾಥ್ ನಾಯ್ಕ್ ಹಾಗೂ ಬಿ.ಆರ್. ಸಾಯಿನಾಥ್ ನಾಯ್ಕ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಕನ್ನಡದ ಕವಿಗಳು ಮತ್ತು ಅವರ ಕಾವ್ಯ ಪರಿಚಯ ವಿಚಾರವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದ್ದು ಎಲ್ಲರೂ ಸಾಹಿತಿಗಳಾಗದಿದ್ದರೂ ನಮ್ಮ ಕನ್ನಡದ ಕವಿಗಳು ಬರೆದಿರುವ ಕತೆ, ಕವನ, ಕಾದಂಬರಿಗಳನ್ನಾದರೂ ಓದಬೇಕು. ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡದ ಮಹಾನ್ ಕವಿಗಳ ಕಾವ್ಯಗಳ ವಿಚಾರಧಾರೆ ಅರಿತುಕೊಳ್ಳಬೇಕು, ಕನ್ನಡದ ಕವಿಗಳು ರಾಜಾಶ್ರಯವಿದ್ದಾಗ ಯಾವ ರೀತಿಯ ಸಾಹಿತ್ಯ ಬರೆದರು, ಸಾಮಾಜಿಕವಾಗಿ ಜನಸಾಮಾನ್ಯರ ಜೊತೆ ಬೆರೆತಮೇಲೆ ಯಾವ ಬಗೆಯ ಸಾಹಿತ್ಯ ಹೊರಹೊಮ್ಮಿತು. ಜಗತ್ತು ಆಧುನಿಕತೆಗೆ ತೆರೆದುಕೊಂಡಾಗ ಬಿ.ಎಂಶ್ರೀ ಟಿ.ಪಿ. ಕೈಲಾಸಂ ಹೇಗೆ ಸಾಹಿತ್ಯ ರಚನೆ ಮಾಡಿದರು ಎಂದು ವಿವರಿಸಿದರು. ಅಲ್ಲದೇ ಹೊಸಬಗೆಯ ಸಾಹಿತ್ಯ ಪ್ರಾಕಾರಗಳು ಎಷ್ಟು ವಿಭಿನ್ನ ನೆಲೆಗಟ್ಟಿನಲ್ಲಿ ಓದುಗರ ಮನಗೆದ್ದವು ಎಂಬುದನ್ನು ತಿಳಿಸಿದರು.
ಚಿಕ್ಕಪೇಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ರಾಮಚಂದ್ರ ಅವರು ಇದುವರೆಗೂ ವೀರಾಜಪೇಟೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರ ಸೇವೆ ಕುರಿತಾಗಿ ಉಪನ್ಯಾಸ ನೀಡಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ಸಮಯದಲ್ಲಿ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ನೇಮಕವಾಗಿದ್ದ ಸಮಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕಾಗಿ ಬಂತು. ಆ ಸಮಯದಲ್ಲಿ ಮೊರಾರ್ಜಿ ವಸತಿ ಶಾಲೆಯ ವತಿಯಿಂದ ಸಹಕಾರ ದೊರಕಿ ಸಮ್ಮೇಳನ ಯಶಸ್ವಿಯಾಗಿ ನಡೆದಿತ್ತು ಎಂದರು. ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ದತ್ತಿನಿಧಿ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿಯಾ ಫಾತೀಮಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸಾವಿತ್ರಿ ಹೆಚ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ, ಕೆ.ಡಿ.ಪಿ. ಸದಸ್ಯ ಶಶಿಧರ್, ಆರ್ಜಿ ಗ್ರಾ.ಪಂ ಮಾಜಿ ಸದಸ್ಯ ಉಪೇಂದ್ರ ಕೆ.ಎನ್., ಗ್ರಾ.ಪಂ. ಸದಸ್ಯ ಜೋಸೆಫ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಎನ್, ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್.ಎನ್., ಶಿಕ್ಷಕÀ ನಟರಾಜ್ ಉಪಸ್ಥಿತರಿದ್ದರು.