ಗೋಣಿಕೊಪ್ಪಲು/ ಬೆಂಗಳೂರು, ಮಾ. ೧೩ : ರಾಜ್ಯ ದಿನಗೂಲಿ ನೌಕರರು ಅನೇಕ ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಖಂಡಿತವಾಗಿ ನ್ಯಾಯ ಸಿಗಲಿದೆ ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆಯನ್ನು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ನ್ಯಾಯಯುತ ಸೌಲಭ್ಯಕ್ಕಾಗಿ ಒತ್ತಾಯಿಸಿ ಅನಿರ್ದಿಷ್ಟ ಅವಧಿವರೆಗೆ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧಿವೇಶನದ ಮಧ್ಯೆ ಬಿಡುವು ಮಾಡಿಕೊಂಡು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಪೊನ್ನಣ್ಣ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಕೂಡಲೇ ಪ್ರತಿಭಟನೆ ಸ್ಥಳದಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಕ್ಕೆ ರಾಜ್ಯ ಸಂಘದ ಅಧ್ಯಕ್ಷ ಎ.ಎಂ. ನಾಗರಾಜ್, ಗೌರವ ಅಧ್ಯಕ್ಷ ಸಂಕೇತ್ ಪೂವಯ್ಯ, ಕೊಡಗು ಜಿಲ್ಲಾಧ್ಯಕ್ಷ ಹರೀಶ್ ಹಾಗೂ ಪದಾಧಿಕಾರಿಗಳನ್ನು ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿದರು. ದಿನಗೂಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಸಂಘದ ಗೌರವ ಅಧ್ಯಕ್ಷರೂ ಹಾಗೂ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳ ಬಗ್ಗೆ ವಿವರ ನೀಡಿದರು. ಈ ವೇಳೆ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಳೆದ ೩೦-೪೦ ವರ್ಷಗಳಿಂದ ಸುದೀರ್ಘ ಕಾಲ ಅಲ್ಪ ವೇತನಕ್ಕಾಗಿ ದುಡಿಯುತ್ತಾ ಬಂದಿರುವ ದಿನಗೂಲಿ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದೇವೆ. ಅತಿ ಮುಖ್ಯವಾಗಿ ಆಗಬೇಕಿದ್ದ ನೌಕರರಿಗೆ ಸಾಮಾಜಿಕ ಭದ್ರತೆ ಆಡಿ ಸಿಗಬೇಕಾದ ನಿವೃತ್ತ ಕ್ಷೇಮಾಭಿವೃದ್ಧಿ ನಿಧಿ, ನೌಕರರಿಗೆ ಮಾಸಿಕ ಪಿಂಚಣಿ ಯೋಜನೆ ಜಾರಿ, ಗಳಿಕೆ ರಜೆ ನಗದೀಕರಣ ಸೌಲಭ್ಯಗಳು ನೌಕರರಿಗೆ ಇನ್ನೂ ಲಭ್ಯವಾಗಿಲ್ಲ.
ಈ ಬಗ್ಗೆ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ನೌಕರರ ಗೋಳಿನ ಮನವಿಗೆ ಸರ್ಕಾರದಿಂದ ಸ್ಪಂದನ ಸಿಗದ ಕಾರಣದಿಂದ ಅಂತಿಮವಾಗಿ ಹೋರಾಟ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗಮನ ಸೆಳೆದರು.
ರಾಜ್ಯದ ಎಲ್ಲಾ ಕ್ಷೇಮಾಭಿವೃದ್ಧಿ ಕರ್ತವ್ಯ ನಿರತ ಹಾಗೂ ಸೇವೆಯಿಂದ ನಿವೃತ್ತಿ ಹೊಂದಿದ, ಸೌಲಭ್ಯ ಜಾರಿಗೆ ಮುನ್ನವೇ ನಿಧನ ಹೊಂದಿರುವ ಕುಟುಂಬಗಳನ್ನು ಒಳಗೊಂಡAತೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ರಾಜ್ಯಾಧ್ಯಕ್ಷ ಎ.ಎಂ. ನಾಗರಾಜ್ ಶಾಸಕ ಪೊನ್ನಣ್ಣ ಅವರ ಗಮನ ಸೆಳೆದರು.
ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ-೨೦೧೩ ರನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ ನೀಡಬೇಕಾದ ವೇತನ, ರಜೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ದಿನಗೂಲಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹಸ್ರಾರು ಸಂಖ್ಯೆಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಆಯೋಜಕರು ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ, ಗೌರವಿಸಿದರು.