ಸಿದ್ದಾಪುರ, ಮಾ. ೧೨: ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಅತ್ತಿಮಂಗಲ ಬಳಿಯ ಮೇರಿಲ್ಯಾಂಡ್ ಕಾಫಿ ತೋಟದೊಳಗೆ ನಡೆದಿದೆ.
ಕಾಫಿ ತೋಟದೊಳಗೆ ಬೀಡುಬಿಟ್ಟಿದ್ದ ಅಂದಾಜು ೪೩ ವರ್ಷ ಪ್ರಾಯದ ಗಂಡಾನೆಯು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ತೋಟದೊಳಗೆ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಿದ್ದ ಸೋಲಾರ್‌ಗೆ ಕಾಫಿ ತೋಟದವರು ವಿದ್ಯುತ್ ಸಂಪರ್ಕವನ್ನು ಅಳವಡಿಸಿದ್ದ ಹಿನ್ನೆಲೆಯಲ್ಲಿ ಕಾಡಾನೆಯು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಕಾಡಾನೆ ಸಾವಿಗೆ ತೋಟದ ಉಸ್ತುವಾರಿ ವಹಿಸಿರುವ ಜೋಸ್ ಎಂಬವರ ನಿರ್ಲಕ್ಷ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸಿಎಫ್ ಗೋಪಾಲ್ ಎ.ಎ. ಹಾಗೂ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಸಾವನ್ನಪ್ಪಿರುವ ಕಾಡಾನೆಯ ದಂತಗಳನ್ನು ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು. ಸಾವನ್ನಪ್ಪಿದ ಸಲಗದ ಮೃತ ದೇಹದ ಮರಣೋತ್ತರ
(ಮೊದಲ ಪುಟದಿಂದ) ಪರೀಕ್ಷೆಯನ್ನು ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ಚಿಟ್ಟಿಯಪ್ಪ ಹಾಗೂ ಡಾ. ಶಿಂಧೆ ನಡೆಸಿದರು. ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸಂದರ್ಭ ಉಪವಲಯ ಅರಣ್ಯ ಅಧಿಕಾರಿ ರವಿಯತ್ನಾಳ್, ಸೆಸ್ಕಾಂ ಎಇಇ ಮಂಜುನಾಥ್, ಜೆಇ ಮಂಜುನಾಥ್, ಅರಣ್ಯ ಗಸ್ತು ಉಸ್ತುವಾರಿ ಸಿಬ್ಬಂದಿ ವೆಂಕಟೇಶ್ ಹಾಜರಿದ್ದರು.
ಮೇರಿಲ್ಯಾಂಡ್ ಕಾಫಿ ತೋಟದೊಳಗೆ ಸಲಗವೊಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದನ್ನು ಅರಿತ ಸಮೀಪದ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡು ಹಗಲಿನ ವೇಳೆ ಕಾಫಿ ತೋಟದೊಳಗೆ ಕಂಡುಬAದವು. ಇದರಿಂದಾಗಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆತಂಕಕ್ಕೆ ಸಿಲುಕಿದರು. ಮೇರಿಲ್ಯಾಂಡ್ ಕಾಫಿ ತೋಟದೊಳಗೆ ಕಾಡಾನೆಗಳು ಓಡಾಡುತ್ತಿದ್ದವು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕಾಡಾನೆಗಳನ್ನು ಓಡಿಸಿದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇತ್ತೀಚಿಗೆ ಮೇರಿಲ್ಯಾಂಡ್ ಕಾಫಿ ತೋಟದ ಮಾಲೀಕರ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಈ ಹಿಂದೆ ಕೂಡ ಇವರ ಮನೆಯಂಗಳದಲ್ಲಿ ಇದ್ದ ಕಾರುಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು. ಕಾಡಾನೆಗಳ ಹಾವಳಿಯಿಂದಾಗಿ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇರಿಲ್ಯಾಂಡ್ ಕಾಫಿ ತೋಟದ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಕಾರ್ಮಿಕರು ಜೀವಭಯದಿಂದಲೇ ಕೆಲಸ ನಿರ್ವಹಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
-ವರದಿ ವಾಸು