ಕಣಿವೆ, ಮಾ. ೧೩ : ಕೊಡಗು ಜಿಲ್ಲೆಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್ ಎಂದೇ ಜನಜನಿತವಾಗಿರುವ ಕುಶಾಲನಗರ ತಾಲ್ಲೂಕಿನ ದುಬಾರೆ ಕಾವೇರಿ ತೀರ ರಣ ಬಿಸಿಲಿಗೆ ದಿನೇ ದಿನೇ ಒಣಗಿ ಬಣಗುಟ್ಟುತ್ತಿದೆ. ದುಬಾರೆ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳಿಗೆ ನಿತ್ಯವೂ ಮಾಡಿಸುವ ಸ್ನಾನ ಹಾಗೂ ಅವುಗಳ ದಾಹ ನೀಗಿಸುವ ಪಾನಕ್ಕೆ ನೀರಿನ ಬರ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.

ಇನ್ನು ಹತ್ತು ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಾರದಿದ್ದರೆ ಜೀವನದಿ ಕಾವೇರಿಯಲ್ಲಿ ಹರಿಯುವ ನೀರು ಸಂಪೂರ್ಣ ಸ್ಥಗಿತವಾದರೆ ಅಚ್ಚರಿಪಡುವಂತಿಲ್ಲ.!

ಸಾಕಾನೆ ಶಿಬಿರದಲ್ಲಿ ಬರೋಬ್ಬರಿ ೨೮ ಸಾಕಾನೆಗಳಿವೆ. ಇವುಗಳಿಗೆ ನಿತ್ಯವೂ ಆನೆಗಳ ಮಾವುತರು ಹಾಗೂ ಕಾವಾಡಿಗಳು ಸ್ನಾನ ಮಾಡಿಸುತ್ತಾರೆ. ಹಾಗಾಗಿ ಸಾಕಾನೆಗಳ ಸ್ನಾನಕ್ಕೆ ನದಿಯಲ್ಲಿ ನೀರೇ ಇಲ್ಲದಂತಹ ಪರಿಸ್ಥಿತಿ ತಲೆದೋರುವ ಆತಂಕ ಎದುರಾಗಿದೆ.

ಆವಿಯಾಗುತ್ತಿರುವ ನದಿ ನೀರು

ದುಬಾರೆ ಕಾವೇರಿ ನದಿಯಲ್ಲಿ ನೀರಿನ ಹರಿವು ಪೂರ್ಣ ಪ್ರಮಾಣದಲ್ಲಿ ಕ್ಷೀಣಿಸಿರುವುದರಿಂದ ನದಿಯ ಅಂಗಳದಲ್ಲಿ ಈಗ ಬರೀ ಕರಿ ಕಲ್ಲುಗಳು ಕಾಣುತ್ತಿವೆ. ಸುಡುವ ಬಿಸಿಲಿಗೆ ಕಾಯುವ ಈ ಕಲ್ಲುಗಳ ಮೇಲೆ ಯಾರೂ ಕೂಡ ಬರಿಗಾಲಲ್ಲಿ ನಡೆಯದಷ್ಟು ಸುಡುತ್ತಿದ್ದು ನದಿಯಲ್ಲಿ ನಿಲುಗಡೆಗೊಂಡ ನೀರು ಇಂಗುತ್ತಿದೆ. ಹಾಗಾಗಿ ನದಿಯಲ್ಲಿನ ನೀರು ಇನ್ನು ಮುಂದಿನ ಹತ್ತು ದಿನಗಳಲ್ಲಿ ಬಹುತೇಕ ಇಂಗಿಹೋಗುವ ಆತಂಕವಿದೆ.

ಸಾಕಾನೆಗಳಿಗೆ ಕೊಳವೆ ಬಾವಿ ನೀರು ಸಿದ್ಧತೆ

ಸಾಕಾನೆಗಳಿಗೆ ನದಿಯ ನೀರಿನ ಬವಣೆ ಶುರುವಾದರೆ ಅರಣ್ಯಾಧಿಕಾರಿಗಳು ದುಬಾರೆ ಸಾಕಾನೆ ಶಿಬಿರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಅಂದರೆ ಎರಡು ಕಡೆ ಯಾಂತ್ರಿಕ ಕೊಳವೆ ಬಾವಿಗಳಿದ್ದು ನೀರನ್ನು ಸಂಗ್ರಹಿಸಿಡಲು ತೊಟ್ಟಿಗಳನ್ನು ನಿರ್ಮಿಸಲಾಗಿದ್ದು ಸಾಕಾನೆಗಳ ದಾಹ ತಣಿಸಲು ಇವು ಉಪಯುಕ್ತವಾಗಿವೆ. ಹಾಗೆಯೇ ಸ್ನಾನಕ್ಕೆ ಪೈಪುಗಳ ಮೂಲಕ ಸಾಕಾನೆಗಳ ಸ್ನಾನ ಮಾಡಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ.

ಜೊತೆಗೆ ನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ಮಿಸಲಾಗಿದೆ. ಸಾಕಾನೆಗಳಿಗೆ ಸ್ನಾನ ಮಾಡಿಸಲು ಪೈಪ್‌ಗಳನ್ನು ಬಳಸಿ ಸ್ನಾನ ಮಾಡಿಸಬಹುದಾಗಿದೆ. ಕಳೆದ ವರ್ಷವೂ ದುಬಾರೆಯ ಕಾವೇರಿ ನದಿಯಲ್ಲಿ ಜಲಕಂಟಕ ಎದುರಾದಾಗ ಇದೇ ವ್ಯವಸ್ಥೆ ಮುಂದುವರೆದಿತ್ತು ಎಂದು ಶಿಬಿರದ ಅರಣ್ಯಾಧಿಕಾರಿ ರತನ್ "ಶಕ್ತಿ" ಗೆ ವಿವರಿಸಿದರು.

ಶಿಬಿರದಲ್ಲಿನ ಆನೆಗಳು

ದುಬಾರೆ ಸಾಕಾನೆ ಶಿಬಿರದಲ್ಲಿ ೨೫ ಸಾಕಾನೆಗಳಿವೆ. ಹಾಗೆಯೇ ಬೇರೆ ಬೇರೆ ಕಡೆಗಳಿಂದ ಸೆರೆ ಹಿಡಿದು ತಂದು ಕ್ರಾಲ್ ನಲ್ಲಿ ೩ ಆನೆಗಳನ್ನು ಉಪಚರಿಸುತ್ತಿದ್ದು ಒಟ್ಟು ೨೮ ಸಾಕಾನೆಗಳಿವೆ. ಈ ಪೈಕಿ ಹೆಣ್ಣಾನೆಗಳು ಕೇವಲ ೨ ಇದ್ದು, ಉಳಿದ ೨೬ ಗಂಡಾನೆಗಳಾಗಿವೆ. ಇವುಗಳಿಗೆ ನಿತ್ಯವೂ ಭತ್ತ, ಭತ್ತದ ಹುಲ್ಲು, ರಾಗಿ ಮುದ್ದೆ ನೀಡಲಾಗುತ್ತಿದೆ.

(ಮೊದಲ ಪುಟದಿಂದ) ಬಿಸಿಲಿನಿಂದ ಸಾಕಾನೆಗಳನ್ನು ತಂಪು ಮಾಡಲು ಅವುಗಳ ನೆತ್ತಿಗೆ ಹರಳೆಣ್ಣೆ ಹಚ್ಚಲಾಗುತ್ತಿದೆ.

ಪ್ರವಾಸಿಗರಿಗೆ ನಿರಾಸೆ

ದುಬಾರೆ ಕಾವೇರಿ ನದಿಯಲ್ಲಿ ನೀರಿಲ್ಲದ ಕಾರಣ ದೋಣಿ ಸಂಚಾರ ಹಾಗೂ ಪ್ರವಾಸಿಗರ ಮನ ತಣಿಸುವ ರ‍್ಯಾಫ್ಟಿಂಗ್ ಸಾಹಸ ಕ್ರೀಡೆಗಳಿಗೆ ಬ್ರೇಕ್ ಬಿದ್ದ ಕಾರಣ ದೂರದಿಂದ ದುಬಾರೆಗೆ ಧಾವಿಸುವ ಪ್ರವಾಸಿಗರು ನಿರಾಸೆಯಿಂದ ಮರಳುವ ಸ್ಥಿತಿ ನಿರ್ಮಾಣವಾಗಿದೆ.

ನದಿಯೊಳಗೆ ಇಳಿಯದಂತೆ ಮಾರ್ಗಸೂಚಿ

ನದಿಯ ಪರಿಸರ ಹಾಗೂ ನಿಂತ ನೀರಿನ ಮಾಹಿತಿ ಅರಿಯದ ಪ್ರವಾಸಿಗರು ಬಿಸಿಲ ಝಳಕ್ಕೆ ದೇಹ ತಂಪು ಮಾಡಿಕೊಳ್ಳಲು ನೀರಿಗೆ ಹಾರಿ ಅಪಾಯ ತಂದುಕೊಳ್ಳುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನದಿಯ ಪರಿಸರದಲ್ಲಿ ಅಲ್ಲಲ್ಲಿ ಹಗ್ಗಗಳನ್ನು ಕಟ್ಟಿ ಪ್ರವಾಸಿಗರ ನದಿ ಸಂಚಾರವನ್ನು ನಿಷೇಧಿಸಿದ್ದು ಹಗಲು ವೇಳೆ ನದಿಯನ್ನು ಕಾಯಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಮೌನಕ್ಕೆ ಸರಿದ ದೋಣಿಗಳು

ವರ್ಷದ ಎಂಟರಿAದ ಹತ್ತು ತಿಂಗಳ ಕಾಲ ನಿರಂತರವಾಗಿ ನದಿಯೊಳಗೆ ಸಂಚರಿಸುತ್ತಾ ಪ್ರವಾಸಿಗರು ಹಾಗೂ ದುಬಾರೆ ಹಾಡಿಯ ಗಿರಿಜನರನ್ನು ಹೊತ್ತು ನದಿಯಲ್ಲಿ ಆಚೆ ಈಚೆ ಸಾಗಿಸುತ್ತಿದ್ದ ಯಾಂತ್ರಿಕ ದೋಣಿಗಳು ಇದೀಗ ಕಳೆದ ಒಂದು ತಿಂಗಳಿAದ ತಮ್ಮ ಕೆಲಸ ನಿಲ್ಲಿಸಿ ಮೌನಕ್ಕೆ ಸರಿದಿವೆ.

ಅರಣ್ಯ ಇಲಾಖೆಗೆ ಸೇರಿದ ಈ ಯಾಂತ್ರಿಕ ದೋಣಿಗಳನ್ನು ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗುವ ಸಮಯದವರೆಗೂ ಅಲುಗಾಡಿಸದಂತೆ ಮರಕ್ಕೆ ಕಟ್ಟಿ ನದಿಯೊಳಗೆ ನಿಲ್ಲಿಸಿರುವುದರಿಂದ ಸದಾ ಜನರನ್ನು ಹೊತ್ತು ಸಾಗುತ್ತಿದ್ದ ಇವುಗಳು ಈಗ ಅನಾಥ ಸ್ಥಿತಿಯಲ್ಲಿವೆ.

ಮಳೆ ಬರಲಿ - ನದಿಯಲ್ಲಿ ನೀರು ಹರಿಯಲಿ

ನೀರಿಲ್ಲದೇ ನದಿ ಪರಿಸರ ಬಿಕೋ ಎನ್ನುತ್ತಿದ್ದು ನೋಡುಗರಿಗೆ ಹಾಗೂ ಪರಿಸರ ಪ್ರೇಮಿಗಳಿಗೆ ನದಿಯ ಪರಿಸರ ಒಂಥರ ಮನಸ್ಸಿಗೆ ಖೇದ ವೆನಿಸುವಂತಿದೆ.

ಹಿAದಿನ ಎರಡು ದಶಕÀÀಗಳ ಈಚೆಗೆ ಇಂತಹ ನದಿ ಒಣಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಭವಿಷ್ಯದಲ್ಲಿ ಇನ್ನೆಂತಹ ನಿರ್ನಾಮ ಕಾದಿದೆಯೋ ಎಂಬ ಆತಂಕ ಹಾಗೂ ಅವ್ಯಕ್ತ ದುಗುಡ ನೋಡುಗರನ್ನು ಆವರಿಸಿದೆ.

ತುಂಬಿ ಹರಿಯುತ್ತಿದ್ದ ನದಿಯ ತೀರ ಬೇಸಗೆಯ ಆರಂಭದಲ್ಲಿ ಹೀಗೆ ನೀರಿಲ್ಲದೇ ಒಣಗಿ ನಿಂತರೆ ಜಲಚರಗಳು ಹಾಗೂ ಜೀವ ಕೋಟಿಗಳ ಪರಿಸ್ಥಿತಿ ಚಿಂತಾಜನಕ. ಹಾಗಾಗಿ ಬೇಗನೇ ಮಳೆಯೂ ಬರಲಿ. ನದಿಯಲ್ಲಿ ನೀರು ಹರಿಯಲಿ ಎಂದು ಜನ ಕಾವೇರಮ್ಮನಿಗೆ ಪ್ರಾರ್ಥಿಸುವಂತಾಗಿದೆ.

ವಿಶೇಷ ವರದಿ : ಕೆ.ಎಸ್.ಮೂರ್ತಿ