ಸೋಮವಾರಪೇಟೆ, ಮಾ. ೧೨: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ೧.೬೦ಕೋಟಿ ರೂ. ವೆಚ್ಚದ ಸರ್ಕಾರಿ ಆಸ್ಪತ್ರೆ ಉನ್ನತೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ನಗರ ಕಾಂಗ್ರೆಸ್ ಸಮಿತಿ ಹಾಗೂ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಇಲಾಖೆಯ ಅಭಿಯಂತರ ನಾಗರಾಜು ಮತ್ತು ಗುತ್ತಿಗೆದಾರ ಶ್ರೀನಿವಾಸ್ ಅವರೊಂದಿಗೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಮಳೆಗಾಲದಲ್ಲಿ ಹೆಚ್ಚು ಗಾಳಿಯೊಂದಿಗೆ ಮಳೆ ಸುರಿಯುತ್ತದೆ. ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ, ಮೇಲ್ಛಾವಣಿ ಹಾರಿ ಹೋಗಿರುತ್ತದೆ. ಒಳರೋಗಿಗಳ ಕೊಠಡಿಗಳು ಸೋರದಂತೆ ಕಾಮಗಾರಿ ನಡೆಸಬೇಕು ಎಂದು ಹೇಳಿದರು. ಶೌಚಾಲಯ, ನೀರು ಸರಬರಾಜಿನ ಪೈಪ್‌ಲೈನ್, ಟೈಲ್ಸ್, ಇಂಟರ್‌ಲಾಕ್ ಸೇರಿದಂತೆ ಎಲ್ಲಾ ಕಾಮಗಾರಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಅವಶ್ಯಕವಿರುವ ಸೌಲಭ್ಯಗಳ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಸ್ತçಚಿಕಿತ್ಸಕ ಡಾ. ಜಮೀರ್ ಅವರು ಹೇಳಿದರು.

ಈ ಸಂದರ್ಭ ರಕ್ಷಾ ಸಮಿತಿ ಸದಸ್ಯರಾದ ಮಂಜುಳಾ ಹರೀಶ್, ಕೆ.ಪಿ. ರವೀಶ್, ಜೇಕಬ್ ಸೈಮನ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಾಂತರಾಜ್, ಶೀಲಾ ಡಿಸೋಜ, ಮೀನಾ ಕುಮಾರಿ, ಜಮೀರ್, ಮಹಮ್ಮದ್ ಶಫಿ, ಎಂ.ಎ. ರುಬಿನಾ, ವಿನಿ, ವಿನೋದ್, ರಿಯಾಜ್, ಸಂತೋಷ್ ಇದ್ದರು.