ಸೋಮವಾರಪೇಟೆ, ಮಾ. ೧೩: ತಾಲೂಕಿನ ಶಾಂತಳ್ಳಿ ಹೋಬಳಿಯ ಹರಗ ಗ್ರಾಮದಲ್ಲಿ ಟವರ್ ಇದ್ದರೂ ನೆಟ್‌ವರ್ಕ್ ಇಲ್ಲದೇ ಇರುವುದರಿಂದ ಮೊಬೈಲ್ ಬಳಕೆದಾರರು ಪರದಾಡುತ್ತಿದ್ದಾರೆ.
ಎ.ಐ. ಕಾಲಘಟ್ಟದಲ್ಲಿ ಜಗತ್ತು ಮುಂದುವರೆಯುತ್ತಿದ್ದರೂ, ಹರಗ ಗ್ರಾಮದಲ್ಲಿ ೫ಜಿ ನೆಟ್‌ವರ್ಕ್ ಸಂಪರ್ಕವಿರಲಿ, ಕನಿಷ್ಟ ೨ ಜಿ ನೆಟ್‌ವರ್ಕ್ ಸಹ ಸಮರ್ಪಕವಾಗಿಲ್ಲ. ಬಿಎಸ್‌ಎನ್‌ಎಲ್‌ನಿಂದ ಕಾಟಾಚಾರಕ್ಕೆ ಎಂಬAತೆ ಟವರ್ ಅಳವಡಿಸಿದ್ದು, ಸಮರ್ಪಕವಾಗಿ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಈ ಭಾಗದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಹಲವಷ್ಟು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಳನ್ನು ಮೊಬೈಲ್‌ಗಳಲ್ಲಿಯೇ ಪಡೆಯುತ್ತಾರೆ. ಇದರೊಂದಿಗೆ ಸಂವಹನಕ್ಕೂ ಮೊಬೈಲ್ ಅತ್ಯಗತ್ಯವಾಗಿದೆ. ಪ್ರತಿ ಮನೆಯಲ್ಲೂ ಕನಿಷ್ಟ ೩ ರಿಂದ ೪ ಮೊಬೈಲ್‌ಗಳಿದ್ದು, ಬಹುತೇಕ ಮಂದಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅವಲಂಬಿಸಿದ್ದಾರೆ.
ಆದರೆ ಗ್ರಾಮದಲ್ಲಿರುವ ಟವರ್‌ನಲ್ಲಿ ನೆಟ್‌ವರ್ಕ್ ಇಲ್ಲದೇ ಇರುವುದರಿಂದ ಮೊಬೈಲ್ ಇದ್ದೂ, ಕರೆನ್ಸಿ ಹಾಕಿಯೂ ಪ್ರಯೋಜನ ಇಲ್ಲದಂತಾಗಿದೆ. ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ಬಿಎಸ್‌ಎನ್‌ಎಲ್ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥ ಶರಣ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಟವರ್ ಸಮಸ್ಯೆಯನ್ನು ಬಗೆಹರಿಸಿ, ಈ ಭಾಗದ ಮೊಬೈಲ್ ಬಳಕೆದಾರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಶರಣ್ ಆಗ್ರಹಿಸಿದ್ದಾರೆ.