ಕೂಡಿಗೆ, ಮಾ. ೧೧: ಜಿಲ್ಲೆಯಲ್ಲಿ ಈಗಾಗಲೇ ಕೆಲ ಭಾಗಗಳಲ್ಲಿ ಜಲಜೀವನ್ ಮಿಷನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ ಎಂಬ ಸಾರ್ವಜನಿಕ ಮನವಿಯ ಮೇರೆಗೆ ಸಂಸದ ಯಧುವೀರ್ ಕೃಷ್ಣರಾಜ ಚಾಮರಾಜೇಂದ್ರ ಒಡೆಯರ್ ಅವರ ಸೂಚನೆಯಂತೆ ಕುಶಾಲನಗರ ಮತ್ತು ಸೋಮವಾರಪೇಟೆ ವಿಭಾಗಗಳಲ್ಲಿ ಸಂಬAಧಿಸಿದ ಇಲಾಖೆಯ ವತಿಯಿಂದ ಕಾಮಗಾರಿಗಳು ಚುರುಕುಗೊಂಡಿವೆ.
ಕಳೆದ ಸಾಲಿನಲ್ಲಿ ಬೇರೆ, ಬೇರೆ ಸಮಸ್ಯೆಗಳಿಂದ ಪೈಪ್‌ಲೈನ್ ಅಳವಡಿಕೆ, ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ತೊಂದರೆಯಾಗಿತ್ತು. ಆದರೆ ಇದೀಗ ಇಲಾಖೆಯ ನಿಯಮಾನುಸಾರ ಗ್ರಾಮಾಂತರ ಪ್ರದೇಶಗಳಲ್ಲಿ ಹಣ ಬಿಡುಗಡೆ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕುಶಾಲನಗರದಲ್ಲಿ ಗ್ರಾಮಾಂತರ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ತುರ್ತಾಗಿ ಕುಡಿಯುವ ನೀರಿನ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದು, ಜಲಜೀವನ್ ಮಿಷನ್ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಂಸದರು ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ಹಾಗೆ ಇಲಾಖೆಯ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕೊಳವೆ ಬಾವಿಗಳು ಬತ್ತಿಹೋಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮುಖೇನ ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.