ಮಡಿಕೇರಿ, ಮಾ. ೧೦ : ಯೋಗಾಸನದ ಮೂಲಕ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ೫ನೇ ತರಗತಿ ವಿದ್ಯಾರ್ಥಿನಿ ಸಿಂಚನ ಕೀರ್ತಿಕುಮಾರ್, ಇದೀಗ ತನ್ನದೇ ದಾಖಲೆಯನ್ನು ಮುರಿಯಲು ಸಿದ್ಧತೆ ಮಾಡಿದ್ದು, ತಾನು ವ್ಯಾಸಂಗ ಮಾಡುತ್ತಿರುವ ಮಡಿಕೇರಿ ತಾಲೂಕಿನ ಮದೆನಾಡಿನ ಬಿಜಿಎಸ್ ಶಾಲೆಯಲ್ಲಿ ತಾ. ೧೨ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ಮೂರು ರೀತಿಯ ಯೋಗ ಪ್ರದರ್ಶನ ಮಾಡುವ ಮೂಲಕ ಸಿಂಚನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಮೂರು ದಾಖಲೆಯನ್ನು ನಿರ್ಮಿಸುವ ಗುರಿ ಹೊಂದಿದ್ದಾಳೆ.
ಡಿAಪಾಸನದಲ್ಲಿ ಒಂದು ನಿಮಿಷಕ್ಕೆ ೧೫ ಮೀಟರ್ ಚಲಿಸುವುದು, ಉರಬ್ರಾಸನದಲ್ಲಿ ಒಂದು ನಿಮಿಷ ಅದೇ ಸ್ಥಿತಿಯಲ್ಲಿರುವುದು ಮತ್ತು ಮೃಗಮುಖಾಸನದಲ್ಲಿ ಕೂಡ ಒಂದು ನಿಮಿಷ ಏಕಸ್ಥಿತಿಯಲ್ಲಿರುವ ಯೋಗಾಸನವನ್ನು ಸಿಂಚನ ಪ್ರದರ್ಶಿಸಲಿದ್ದಾಳೆ. ಅಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮಧ್ಯಪ್ರದೇಶದ ಅಧಿಕಾರಿಗಳು ಉಪಸ್ಥಿತರಿದ್ದು, ತೀರ್ಪಿನೊಂದಿಗೆ ಅರ್ಹತಾ ಪತ್ರ ನೀಡಲಿದ್ದಾರೆ.
ಈ ಹಿಂದೆಯೂ ಡಿಂಪಾಸನದಲ್ಲಿ ಒಂದು ನಿಮಿಷಕ್ಕೆ ೧೦ ಮೀಟರ್ ಚಲಿಸಿ ವಿಶ್ವ ದಾಖಲೆ ಮಾಡಿದ ಸಿಂಚನ, ಈ ಬಾರಿ ಇದೇ ಆಸನದಲ್ಲಿ ತನ್ನದೇ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದಾಳೆ.
ಗುರು-ತನ್ನ ಸಾಧನೆಯ ಕುರಿತು ಮಡಿಕೇರಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಿಂಚನ, ತಾನು ೬ನೇ ವರ್ಷದಿಂದಲೇ ಯೋಗಾಭ್ಯಾಸ ಮಾಡುತ್ತಿದ್ದೇನೆ, ತನಗೆ ನನ್ನ ಅಮ್ಮನೇ ಯೋಗ ಗುರು ಎಂದು ತಿಳಿಸಿದರು.
ಸಿಂಚನಾಳ ತಾಯಿ ರೇಣುಕ ಕೀರ್ತಿಕುಮಾರ್ ಮಾತನಾಡಿ ಸ್ವತಃ ತಾನು ಶಿಕ್ಷಕಿಯಾಗಿದ್ದು, ಯೋಗಾಸನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ತನ್ನಿಂದ ಸ್ಫೂರ್ತಿ ಪಡೆದ ಪುತ್ರಿ ಸಿಂಚನ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ. ಮೂರು ವಿಶ್ವ ದಾಖಲೆ, ಒಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಒಂದು ರಾಜ್ಯಮಟ್ಟದ ದಾಖಲೆ ಮಾಡುವ ಮೂಲಕ ಐದು ದಾಖಲೆಗಳನ್ನು ಮಾಡಿದ್ದಾಳೆ ಎಂದು ತಿಳಿಸಿದರು.
ಸಿಂಚನಾಳ ತಂದೆ ಬಿ.ಸಿ. ಕೀರ್ತಿಕುಮಾರ್,ಮದೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ, ಮಡಿಕೇರಿಯ ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಹಾಗೂ ಲೇಖಕ ಹರೀಶ್ ಸರಳಾಯ ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು