ಮಡಿಕೇರಿ, ಮಾ. ೧೧: ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಗರಸಭೆ ಆಯವ್ಯಯ ಮಂಡನೆ ನಡೆಯಿತು.
೨೦೨೫-೨೬ನೇ ಆರ್ಥಿಕ ಸಾಲಿನಲ್ಲಿ ಆರಂಭಿಕ ಶಿಲ್ಕು ರೂ. ೧೩,೯೮,೩೩,೨೮೨ನೊಂದಿಗೆ ಆಯ ರೂ. ೨೯,೭೨,೪೮,೧೦೦, ವ್ಯಯ ರೂ. ರೂ. ೪೨,೩೬,೯೩,೧೦೦ ಎಂದು ಅಂದಾಜಿಸಲಾಗಿದ್ದು, ರೂ. ೧,೩೩,೮೮,೨೮೨ ಉಳಿತಾಯ ಬಜೆಟ್ ನಿರೀಕ್ಷೆ ಮಾಡಲಾಗಿದೆ ಎಂದು ಪೌರಾಯುಕ್ತ ರಮೇಶ್ ಸಭೆಗೆ ವಿವರಿಸಿದರು.
ವಿವಿಧ ಆದಾಯ ಮೂಲಗಳಿಂದ ರೂ. ೨೩೪೮.೦೫ ಲಕ್ಷ ಹಾಗೂ ವಿವಿಧ ಕೆಲಸಗಳಿಗೆ ರೂ ೩೬೮೨.೫ ಲಕ್ಷ ವ್ಯಯವಾಗುತ್ತದೆ ಎಂದು ಅಂದಾಜುಪಟ್ಟಿಯ ವಿವರವನ್ನು ಸಭೆಯ ಮುಂದಿಟ್ಟರು.
ಚರ್ಚೆ ಮುಂದೂಡಿಕೆ
ಬಜೆಟ್ ಮಂಡನೆ ಸಂಬAಧ ಪ್ರಸ್ತಾಪಿತ ವಿಷಯಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ಬೇಕು ಎಂದು ಸದಸ್ಯ ಕೆ.ಎಸ್. ರಮೇಶ್ ಕೋರಿದರು.
ಅನಿತಾ ಪೂವಯ್ಯ ಮಾತನಾಡಿ, ನಗರದ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ, ಪ್ರಸಕ್ತ ಆರ್ಥಿಕ ವರ್ಷ ಅಂತ್ಯದೊಳಗೆ ದಿನಾಂಕ ನಿಗದಿಗೊಳಿಸಿ ಚರ್ಚೆಗೆ ಅವಕಾಶ ಒದಗಿಸಲಾಗುವುದು. ಸದಸ್ಯರುಗಳಲ್ಲಿ ಬಜೆಟ್ ಕುರಿತು ಚರ್ಚೆಗಳಿದ್ದರೆ ಮೊದಲೇ ಪ್ರಶ್ನೆಗಳನ್ನು ನೀಡುವಂತೆ ಸಲಹೆ ನೀಡಿದರು.
ಆಸ್ತಿ ತೆರಿಗೆ ಹೆಚ್ಚಳ
ಸರಕಾರದ ಆದೇಶದ ಅನುಸಾರ ಆಸ್ತಿ ತೆರಿಗೆಯನ್ನು ಶೇ ೩ ಹೆಚ್ಚಳಕ್ಕೆ ಸಭೆ ಅನುಮೋದನೆ ನೀಡಿತು.
೨೦೨೦-೨೧ನೇ ಸಾಲಿನಿಂದ ಪ್ರತಿವರ್ಷ ಕನಿಷ್ಟ ಶೇ. ೩ ಹಾಗೂ ಗರಿಷ್ಠ ಶೇ. ೫ ತೆರಿಗೆ ಹೆಚ್ಚಳ ಮಾಡಲು ಅವಕಾಶವಿದ್ದು, ಸಬ್ ರಿಜಿಸ್ಟಾçರ್ ಮೌಲ್ಯದ ಮಾರ್ಗಸೂಚಿ ಅನ್ವಯ ತೀರ್ಮಾನಿಸಿ ಕ್ರಮತೆಗೆದುಕೊಳ್ಳಬೇಕಾಗಿದೆ ಎಂದು ಕಂದಾಯಾಧಿಕಾರಿ ತಾಹೀರ್ ಸಭೆಗೆ ಮಾಹಿತಿ ನೀಡಿದರು.
ಸದಸ್ಯರುಗಳು ಕನಿಷ್ಟ ಮೊತ್ತವನ್ನು ಹೆಚ್ಚಳ ಮಾಡಲು ಪರಿಗಣಿಸಬೇಕು ಎಂದು ತಿಳಿಸಿದ ಹಿನ್ನೆಲೆ ಶೇ ೩ ರಷ್ಟು ತೆರಿಗೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಯಿತು.
ತ್ವರಿತವಾಗಿ ರಂಗಮAದಿರ ನಿರ್ಮಾಣಕ್ಕೆ ಒತ್ತಾಯ
ಗಾಂಧಿ ಮೈದಾನದಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಂಗಮAದಿರವನ್ನು ತ್ವರಿತವಾಗಿ ಆರಂಭಿಸುವ ಒತ್ತಾಯ ಸದಸ್ಯರಿಂದ ಕೇಳಿಬಂತು.
ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಮೈದಾನದ ಬದಿಯಲ್ಲಿರುವ ಬರೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಬೇಕು. ರಾಜಾಸೀಟ್ ರಸ್ತೆಯಲ್ಲಿ ವಾಹನ ದಟ್ಟಣೆ, ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಗಮನ ಸೆಳೆದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ರೂ. ೨ ಕೋಟಿ ವೆಚ್ಚ ಹಿನ್ನೆಲೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಬೇಕಾಗಿದೆ. ಟೆಂಡರ್ ಪ್ರಕ್ರಿಯೆ ನಡೆಸಿ ಮುಂದಿನ ದಸರಾದೊಳಗೆ
(ಮೊದಲ ಪುಟದಿಂದ) ಪೂರ್ಣಗೊಳಿಸಲು ಚಿಂತಿಸಲಾಗಿದೆ. ಮಳೆಯಿಂದ ಅಡ್ಡಿ ಉಂಟಾಗಿ ಕಾಮಗಾರಿ ವಿಳಂಬವಾರದೂ ದಸರಾ ನಡೆಸಲು ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ ಎಂದರು. ಕಾವೇರಿ ಕಲಾಕ್ಷೇತ್ರ ಅಭಿವೃದ್ಧಿಗೊಂಡ ನಂತರ ಅಲ್ಲಿ ೨೦೦, ಗಾಂಧಿ ಮೈದಾನದಲ್ಲೂ ೩೦೦ ವಾಹನ ನಿಲುಗಡೆಗೆ ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಸಂಚಾರ ದಟ್ಟಣೆಗೆ ಪರಿಹಾರ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಬೇಡ್ಕರ್ ಪ್ರತಿಮೆ ನಿರ್ಮಾಣ - ಮತದಾನ ಮೂಲಕ ಅಂತಿಮ
ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕುರಿತು ಪರ-ವಿರೋಧ ಚರ್ಚೆಗಳು ನಡೆದು ಕೊನೆಯಲ್ಲಿ ಮತ ಹಾಕುವ ಮೂಲಕ ಪ್ರತಿಮೆ ನಿರ್ಮಾಣದ ಜಾಗವನ್ನು ಅಂತಿಮಗೊಳಿಸಲಾಯಿತು.
ಸದಸ್ಯರಾದ ಬಶೀರ್, ಮನ್ಸೂರ್ ಅಲಿ ಪ್ರಸ್ತುತ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಗುರುತಿಸಿರುವ ಜಾಗ ಪ್ರತಿಮೆ ನಿರ್ಮಾಣಕ್ಕೆ ಸೂಕ್ತವಾಗಿಲ್ಲ. ಬದಲಾಗಿ ಹಳೇ ಬಸ್ ನಿಲ್ದಾಣದ ತಡೆಗೋಡೆ ಮೇಲ್ಭಾಗದಲ್ಲಿ ಅಥವಾ ಹೊಸ ಬಸ್ ನಿಲ್ದಾಣದ ಪಾರ್ಕ್ನಲ್ಲಿ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು. ಇದಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದ ಎಸ್.ಸಿ. ಸತೀಶ್ ಸೇರಿದಂತೆ ಬಿಜೆಪಿ ಸದಸ್ಯರು ನಿಗದಿತ ಜಾಗದಲ್ಲಿಯೇ ಪ್ರತಿಮೆ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದರು. ನಿಗದಿತ ಜಾಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಆಕ್ಷೇಪಣೆ ವ್ಯಕ್ತವಾಗಿರುವ ಕುರಿತು ಅಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಸದಸ್ಯರುಗಳು ವಿರೋಧಿಸಿ ಜನಾಭಿಪ್ರಾಯದಡಿ ಮುಂದುವರೆಯಬೇಕಾಗಿದೆ. ಕೆಲವರು ಬೇಕೆಂದು ವಿರೋಧ ಮಾಡುತ್ತಿದ್ದು, ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಆಗ್ರಹಿಸಿದರು. ಕೈ ಎತ್ತುವ ಮೂಲಕ ಮತದಾನ ಮಾಡಿ ಬಹುಮತದಡಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು. ಇದರನ್ವಯ ಕಾರ್ಯಪ್ಪ ವೃತ್ತದಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಹೆಚ್ಚಿನ ಮತಗಳು ಬಂದ ಹಿನ್ನೆಲೆ ನಿರ್ಣಯ ಕೈಗೊಳ್ಳಲಾಯಿತು.
ಪಾರಂಪರಿಕ ತ್ಯಾಜ್ಯ ವಿಲೇವಾರಿ
ನಗರದ ಕಸ ಶೇಖರಣೆಗೊಂಡಿರುವ ಸ್ಟೋನ್ ಹಿಲ್‌ನಲ್ಲಿ ವೈಜ್ಞಾನಿಕವಾಗಿ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಟೆಂಡರ್ ಆಗಿದ್ದು, ಮಳೆಗಾಲದೊಳಗೆ ಕಸ ವಿಲೇವಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಘಟಕ ನಿರ್ಮಾಣ ಸಂಬAಧ ಅರಣ್ಯ ಇಲಾಖೆಗೆ ಹಣ ಪಾವತಿಸಬೇಕಾಗಿದ್ದು, ಅದನ್ನು ಮಾಡುವ ಪ್ರಯತ್ನ ಆಗಿದೆ. ಸದ್ಯದ ಮಟ್ಟಿಗೆ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಆಗಿದ್ದು, ೧೦ ದಿನದೊಳಗೆ ಪ್ರಕ್ರಿಯೆ ನಡೆದು ನಗರದ ಬಹುದೊಡ್ಡ ಸಮಸ್ಯೆ ಪರಿಹಾರವಾಗುವ ವಿಶ್ವಾಸ ಹೊಂದಿದ್ದೇವೆ ಎಂದು ಸಭೆಗೆ ತಿಳಿಸಿದರು.
ಕಿರಿಕಿರಿ ಹುಟ್ಟಿಸಿದ ಅಮೃತ್ ಯೋಜನೆ
ಅಮೃತ್ ೨.೦ ಯೋಜನೆ ಜನರಿಗೆ ಕಿರಿಕಿರಿ ಹುಟ್ಟಿಸಿದೆ ಎಂದು ಸದಸ್ಯ ಅರುಣ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ಕೆಲಸವಾಗುತ್ತಿಲ್ಲ. ಕಂದಕ ತೆಗೆದು ಪೈಪ್ ಹಾಕಲಾಗುತ್ತಿದೆ. ಆದರೆ, ಸರಿಯಾಗಿ ಅದನ್ನು ಮುಚ್ಚದೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಪೈಪ್‌ಗಳು ಹಾನಿಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಪ್ರಸ್ತುತ ನೀರು ಪೂರೈಕೆಯಾಗುತ್ತಿರುವ ಪೈಪ್‌ಗಳು ಹಾಳಾಗುತ್ತಿವೆ. ಕೆಲವೆಡೆ ನೀರು ಸರಬರಾಜಿಗೂ ಕಷ್ಟಕರವಾಗಿದೆ. ಸೂಕ್ತ ರೀತಿಯಲ್ಲಿ ರಸ್ತೆ ಮಧ್ಯೆ ತೆಗೆದಿರುವ ಗುಂಡಿಯನ್ನು ಮುಚ್ಚಬೇಕೆಂದು ಒತ್ತಾಯಿಸಿದರು.
ಮನ್ಸೂರ್ ಅಲಿ ಮಾತನಾಡಿ, ಅರೆಬರೆ ಕಾಮಗಾರಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಯುಜಿಡಿ ರೀತಿ ಈ ಕೆಲಸವೂ ಆಗುವ ಭಯ ಮೂಡಿದೆ. ಜನರಿಂದಲೂ ವ್ಯಾಪಕ ದೂರುಗಳು ಬರುತ್ತಿವೆ. ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿ ಕ್ರಮಕೈಗೊಳ್ಳಬೇಕು. ನೀರಿನ ಪೈಪ್‌ಲೈನ್‌ಗೆ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಬೇಕೆಂದು ಹೇಳಿದರು.
ಗದ್ದಿಗೆ ಅಭಿವೃದ್ಧಿಗೆ ಆಗ್ರಹ
ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಗದ್ದಿಗೆಯನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕೆಂದು ಸದಸ್ಯೆ ಸವಿತಾ ರಾಕೇಶ್ ಮನವಿ ಮಾಡಿದರು. ಗದ್ದಿಗೆ ಉದ್ಯಾನ ಕಳೆಗುಂದಿದೆ. ಇಲ್ಲಿ ಪೂರಕ ವ್ಯವಸ್ಥೆ ಕೈಗೊಂಡು ಆಕರ್ಷಣಿಯ ಕೇಂದ್ರವಾಗಿ ಮಾಡಿ ಬರುವ ಜನರಿಗೆ ಉತ್ತಮ ವಾತಾವರಣ ಕಲ್ಪಿಸಬೇಕೆಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಪ್ರವಾಸಿ ತಾಣಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ‘ಮೈಕ್ರೋ ಪ್ಲಾನ್’ ಮಾಡಿ ಸಮಸ್ಯೆಗಳ ಪಟ್ಟಿ ತಯಾರಿಸಿ ನಗರಸಭೆ ಮೂಲಕ ಪರಿಹಾರಕ್ಕೆ ಮುಂದಾಗಲು ಅವಕಾಶವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.