ಶನಿವಾರಸಂತೆ, ಮಾ. ೧೧: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಖಗೋಳಶಾಸ್ತç ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಖಗೋಳ ವಿಜ್ಞಾನದಲ್ಲಿ ಅಂಗೈಯಲ್ಲಿ ರಾತ್ರಿ ಆಕಾಶವನ್ನು ನೋಡುವ ಬಗ್ಗೆ, ವಿಜ್ಞಾನದ ಕ್ಯಾಲೆಂಡರ್, ಶೂನ್ಯ ನೆರಳಿನ ದಿನದ ಬಗ್ಗೆ, ಗ್ರಹಗಳು ಮತ್ತು ನಕ್ಷತ್ರಗಳ ಪರಿಚಯ ಮಾಡಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಡಿ. ದಯಾಕರ್, ಕೆಂಚಮ್ಮ, ಚಂದ್ರಕಲಾ, ಶ್ರೀದೇವಿ, ಭಾರತಿ, ವೀಣಾ, ಜಯಮ್ಮ, ಫರಿದಾಬಾನು, ಪೂರ್ಣಿಮಾ, ಪೂಜಾ, ಪವಿತ್ರಾ, ಅನಂತ್, ಜಯರಾಂ ಹಾಗೂ ಇತರರು ಹಾಜರಿದ್ದರು.
ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ
ವೀರಾಜಪೇಟೆ, ಮಾ. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ತಾಲೂಕು, ಸ್ವಸಹಾಯ ಸಂಘಗಳ ಒಕ್ಕೂಟ ಇವರ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಗೋಣಿಕೊಪ್ಪ ವಲಯದ ದೇವರಪುರ ಕಾರ್ಯಕ್ಷೇತ್ರದ ಶಿವಣ್ಣ ಅವರ ಕೃಷಿ ತಾಕುವಿನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಗತಿಪರ ಕೃಷಿಕ ಶೇಖರ್ ಮಾತನಾಡಿ, ಅಣಬೆ ಕೃಷಿಯಿಂದ ಹೆಚ್ಚು ಆದಾಯ ಗಳಿಸಬಹುದು, ಅಣಬೆ ಕೃಷಿ ಒಂದು ಲಾಭದಾಯಕ ಕೃಷಿ ಉದ್ಯಮವಾಗಿದೆ ಎಂದರು.
ಪ್ರಗತಿಪರ ಕೃಷಿಕ ಶಿವಣ್ಣ ಮಾತನಾಡಿ, ಬಾಳೆ ಕೃಷಿಯ ವಿವಿಧ ತಳಿಗಳ ಬಗ್ಗೆ ಮತ್ತು ಏಲಕ್ಕಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಅಧ್ಯಕ್ಷ ನವೀನ್, ಸೇವಾ ಪ್ರತಿನಿಧಿ ಸರೋಜಾ, ಸಿಎಸ್‌ಸಿ ಸೇವಾದಾರರಾದ ಸೌಜನ್ಯ, ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅನಾಥ ಶ್ವಾನ - ಬೆಕ್ಕುಗಳ ರಕ್ಷಕಿ ಭವಾನಿಯಮ್ಮ...!
ನಾಪೋಕ್ಲು, ಮಾ. ೧೧: ಐದು ಮರಿ ಹಾಕಿದ ಮುದ್ದಾದ ನಾಯಿಯೊಂದರ ಕೈಕಾಲುಗಳನ್ನು ಕಟ್ಟಿ ಮರಿಗಳೊಂದಿಗೆ ಕರಡ ಗ್ರಾಮದ ಮಲೆತಿರಿಕೆ ಬೆಟ್ಟದ ಕಾಡಿನಲ್ಲಿ ಯಾರೋ ಕರುಣೆ ಇಲ್ಲದವರು ಬಿಟ್ಟು ಹೋಗಿದ್ದರು. ಆದಾಗ ತಾನೇ ಕಣ್ಣುಬಿಟ್ಟ ಪುಟ್ಟ ಮರಿಗಳಿಗೆ ಹಾಲು ಕುಡಿಸಲಾರದೆ ನಾಯಿ ಒದ್ದಾಡಿ ಮೈತುಂಬಾ ಗಾಯ ಮಾಡಿಕೊಂಡಿತ್ತು. ಈ ನಾಯಿ ಹಾಗೂ ಅದರ ಪುಟ್ಟ ಮರಿಗಳಿಗೆ ರಕ್ಷಣೆ ಸಿಕ್ಕಿದ್ದು ಓರ್ವ ಮಹಿಳೆಯಿಂದ. ಯಾವುದೇ ಬೇಸರ ವ್ಯಕ್ತಪಡಿಸದೆ ನಾಯಿ ಹಾಗೂ ಅದರ ಮರಿಗಳಿಗೆ ಹೊಟ್ಟೆ ತುಂಬಿಸಿ ಶುಶ್ರೂಷೆ ಮಾಡಿ ಸಾಕುತ್ತಿದ್ದಾರೆ ಈ ಮಹಿಳೆ.
ಇವರು ಮತ್ತಾರು ಅಲ್ಲ. ಸಮೀಪದ ಕರಡ ಗ್ರಾಮದ ಮಹಿಳೆ ಭವಾನಿಯಮ್ಮ. ಇಂತಹ ಹತ್ತು ಹಲವು ಅನಾಥ ನಾಯಿ ಮರಿಗಳನ್ನು ತಂದು ಇವರು ಸಂರಕ್ಷಿಸುತ್ತಿದ್ದಾರೆ. ಇವರ ಮನೆ ರಸ್ತೆಯ ಬದಿಯಲ್ಲಿ ಇರುವುದರಿಂದ ಎಷ್ಟೋ ಮಂದಿ ಚಿಕ್ಕ ಮರಿಗಳನ್ನು ತಂದು ಬಿಟ್ಟು ತೆರಳುತ್ತಾರೆ. ಅವುಗಳಿಗೆಲ್ಲ ಆಶ್ರಯ ತಾಣ ಭವಾನಿಯಮ್ಮನವರ ಮನೆ. ಸದ್ಯ ಭವಾನಿಯಮ್ಮ ೨೦ ನಾಯಿಗಳಿಗೆ ಹಾಗೂ ೩೦ ಬೆಕ್ಕುಗಳಿಗೆ ಆಶ್ರಯ ನೀಡಿದ್ದಾರೆ.
ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ, ವಿಟಮಿನ್ ಪೂರೈಕೆ, ಗಾಯಗಳಿಗೆ ಔಷಧಿ, ದಿನಕ್ಕೆರಡು ಬಾರಿ ಹಾಲು, ಅನ್ನದ ಪೂರೈಕೆ ಎಲ್ಲವನ್ನು ಭವಾನಿಯವರು ತಮ್ಮ ಸೀಮಿತ ಆದಾಯದಲ್ಲಿ ನಿಭಾಯಿಸುತ್ತಿದ್ದಾರೆ. ೫೦ರ ಗಡಿ ದಾಟಿದ ಈ ಮಹಿಳೆ ಬೆಳಿಗ್ಗೆ ಐದು ಗಂಟೆಯಿAದ ನಾಯಿ-ಬೆಕ್ಕುಗಳ ಗೂಡುಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗುತ್ತಾರೆ. ೩೦ಕ್ಕೂ ಅಧಿಕ ತಟ್ಟೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿಟ್ಟು ಸಂಜೆ ಆಹಾರಕ್ಕೆ ಬಳಸುತ್ತಾರೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಸಾಕಲು ಸ್ಥಳದ ಅಭಾವವಾದಾಗ ಚಿಂತೆಗೀಡಾದ ಭವಾನಿಯವರಿಗೆ ಕೆಲವರು ನೆರವಿನ ಹಸ್ತ ಚಾಚಿದ್ದಾರೆ. ನಾಯಿಗಳಿಗೆ ಕೊಠಡಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
ರಕ್ಷಣೆಗಾಗಿ, ಹವ್ಯಾಸಕ್ಕಾಗಿ, ಬೇಟೆಗಾಗಿ, ಶ್ರೀಮಂತಿಕೆಯ ಸಂಕೇತವಾಗಿ ನಾಯಿಗಳನ್ನು ಸಾಕುವವರಿದ್ದಾರೆ. ಹೆಣ್ಣು ನಾಯಿಗಳು ಮರಿ ಹಾಕಿದಾಗ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ನಾಯಿ ಮರಿಗಳನ್ನು ಎಲ್ಲೆಂದರಲ್ಲಿ ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಕೊಡುವವರು ಹಲವರು. ಕಣ್ಣು ಬಿಡದ ಚಿಕ್ಕ ಮರಿಗಳನ್ನು ರಸ್ತೆಯಲ್ಲಿ ಬಿಡುವುದು ಮಾಮೂಲಿ. ಇನ್ನು ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕುವ ತಡೆಗಳಿಗೆ ಸಿಕ್ಕಿ ಬಿಡಿಸಿಕೊಳ್ಳಲಾರದ ನಾಯಿಗಳೂ ಇರುತ್ತವೆ. ದಿಕ್ಕಿಲ್ಲದ, ಸೆರೆಸಿಕ್ಕ ನಾಯಿಗಳನ್ನು ಬಿಡಿಸಿ ತಂದು ಸಾಕುವ ಜವಾಬ್ದಾರಿಯನ್ನು ಭವಾನಿ ಮಾಡುತ್ತಿದ್ದಾರೆ.
ಅನಾಥ ಪ್ರಾಣಿಗಳ ರಕ್ಷಕಿ ಭವಾನಿಯವರಿಗೆ ಹೆಣ್ಣು ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಖರ್ಚಾಗುತ್ತದೆ. ಸಾಗಣೆ ವೆಚ್ಚವೂ ದುಬಾರಿ. ಇದನ್ನು ಪಶು ವೈದ್ಯರಿಂದ ಖಾಸಗಿಯಾಗಿ ಮಾಡಿಸಿಕೊಳ್ಳಬೇಕಾಗುತ್ತದೆ.
ನಾಯಿಗಳಿಗೆ ಉಣಿಸಲು ಆಹಾರ, ಹಾಲಿನ ಅಗತ್ಯತೆ ಇದೆ. ಇದೆಲ್ಲದಕ್ಕೂ ಆರ್ಥಿಕ ಹೊರೆಯಾಗುತ್ತಿದೆ ಎನ್ನುತ್ತಾರೆ ಭವಾನಿಯಮ್ಮ. ಆದರೂ ಪ್ರಾಣಿಗಳ ಮೇಲೆ ದಯೆಯಿರಿಸಿ ತಮ್ಮ ಕಾಯಕವನ್ನು ಮುಂದುವರಿಸಿಕೊAಡು ಹೋಗುತ್ತಿದ್ದಾರೆ.
ಕೊಡಗಿನಲ್ಲಿ ಅನಾಥ ಶ್ವಾನಗಳಿಗೆ ಆಶ್ರಯದ ತಾಣಗಳಿಲ್ಲ. ಪ್ರಾಣಿ ದಯಾ ಸಂಘವು ಸಕ್ರಿಯವಾಗಿಲ್ಲ. ಶ್ವಾನಗಳನ್ನು ದತ್ತು ಪಡೆಯಲು, ಜನರಿಗೆ ಅರಿವು ಮೂಡಿಸಲು ಮಾಧ್ಯಮಗಳೂ ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಅನಾಥ ಪ್ರಾಣಿಗಳ ರಕ್ಷಣೆಗೆ ಮುಂದಾಗಿರುವ ಭವಾನಿ ಅಮ್ಮನವರಿಗೆ ಸಹೃದಯರ ನೆರವಿನ ಅಗತ್ಯವಿದೆ. ಸಂತಾನ ಹರಣ ಚಿಕಿತ್ಸೆ ಪಡೆದ ಆರೋಗ್ಯಪೂರ್ಣ ನಾಯಿಗಳನ್ನು ದತ್ತು ಪಡೆದು ಸಾಕುವ ಮೂಲಕ, ನಾಯಿಗಳಿಗೆ ಅಗತ್ಯವಿರುವ ಆಹಾರ ಒದಗಿಸುವ ಮೂಲಕ, ದೇಣಿಗೆ ಸಂಗ್ರಹಿಸಿ ಹೆಣ್ಣು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವುದರ ಮೂಲಕ ಸಹೃದಯರು ಭವಾನಿಯವರಿಗೆ ನೆರವಾದರೆ ಅನಾಥ ಪ್ರಾಣಿಗಳ ರಕ್ಷಣೆಯ ಹೊಣೆ ಹೊತ್ತ ಅವರ ಶ್ರಮ ಸಾರ್ಥಕವಾದೀತು.
- ದುಗ್ಗಳ ಸದಾನಂದ.