ಮಡಿಕೇರಿ, ಮಾ. ೯: ಕಣದಲ್ಲಿ ಒಣಗಲು ಹಾಕಿದ್ದ ಹಸಿಕಾಫಿಯನ್ನು ಕದ್ದೊಯ್ದಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಿತಿಮತಿಯ ಶಾಂತಿನಗರ ನಿವಾಸಿಗಳಾದ ಕೆ.ಬಿ. ಶಫೀಕ್ (೩೬), ಟಿ.ಜೆ. ಫ್ರಾನ್ಸಿಸ್ (೨೯), ನೊಖ್ಯ ಗ್ರಾಮದ ಎಂ.ಜಿ. ಅನೀಸ್ (೨೪), ಪೊನ್ನಪ್ಪಸಂತೆಯ ಎಂ.ಬಿ. ಯಾಸಿನ್ (೨೮) ಬಂಧಿತ ಆರೋಪಿಗಳಾಗಿದ್ದಾರೆ.

ಬಾಡಗ-ಬಾಣಂಗಾಲ ಗ್ರಾಮದ ಹುಂಡಿ ನಿವಾಸಿ ಸಜಿ ಥಾಮಸ್ ಎಂಬವರು ತಮ್ಮ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಅಂದಾಜು ೧೨ ಚೀಲ ಕಾಫಿ ಜ. ೧೬ ರಂದು, ಹುಸೇನ್ ಎಂಬವರ ತೋಟದಲ್ಲಿಟ್ಟಿದ್ದ ಅಂದಾಜು ೮೦೦ ಕೆಜಿ ಹಸಿಕಾಫಿ ಜ. ೨೬ ರಂದು ಕಳ್ಳತನವಾಗಿರುವ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಗಳ ಪತ್ತೆಗಾಗಿ ಮಡಿಕೇರಿ ಡಿವೈಎಸ್‌ಪಿ ಪಿ.ಎ. ಸೂರಜ್, ಸಿಪಿಐ ಪಿ.ಕೆ. ರಾಜು, ಪಿಎಸ್‌ಐ ರಾಘವೇಂದ್ರ, ಶಿವಣ್ಣ ಹಾಗೂ ಪೊಲೀಸ್, ಡಿಸಿಆರ್‌ಬಿ, ತಾಂತ್ರಿಕ ಘಟಕ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ತಾ.೮ ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ವಿಚಾರಣೆಗೊಳ ಪಡಿಸಿದ ಸಂದರ್ಭ ವೀರಾಜಪೇಟೆ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಾಫಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿತರಿಂದ ೨೫೫೦ ಕೆಜಿ ತೂಕದ ಒಟ್ಟು ೫೧ ಚೀಲ ಕಾಫಿ, ಪಿಕಪ್ ವಾಹನ, ಮಾರುತಿ ೮೦೦ ಕಾರು, ಮೋಟರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಬೇಧಿಸಿದ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.