ಕಣಿವೆ, ಮಾ. ೯ : ಬೇಸಿಗೆಯ ಬಿಸಿಲು ಮಾರ್ಚ್ ತಿಂಗಳ ಎರಡನೇ ವಾರದಲ್ಲಿಯೇ ತನ್ನ ಉಗ್ರ ಪ್ರತಾಪ ತೋರುತ್ತಿದೆ. ಶಿವರಾತ್ರಿ ಕಳೆದು ಯುಗಾದಿ ಸಮೀಪಿಸಿದರೂ ಕೂಡ ಮಳೆರಾಯನ ದರ್ಶನವಾಗುತ್ತಿಲ್ಲ. ಹಾಗಾಗಿ ಭಯಂಕರ ರಣಬಿಸಿಲಿಗೆ ಭೂಮಿ ಸುಡುತ್ತಿದೆ. ಅಂತರ್ಜಲ ಪಾತಾಳದತ್ತ ಹೋಗುತ್ತಿದೆ. ಕಣಿವೆ ಗ್ರಾಮದ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಅವರ ಮನೆಯಂಗಳದಲ್ಲಿ ಕಳೆದ ಒಂದು ದಶಕದಿಂದಲೂ ಕುಡಿಯುವ ನೀರು ಪೂರೈಸುತ್ತಿದ್ದ ಬಾವಿ ಬೇಸಿಗೆಯ ಬಿಸಿಲಿಗೆ ಒಣಗಿ ತನ್ನ ಕೆಲಸ ನಿಲ್ಲಿಸಿದೆ. ಇದೇ ರೀತಿ ಹಲವು ಮಂದಿಯ ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿವೆ.
ಕುಶಾಲನಗರದ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಗುಡ್ಡದಂತಿರುವ ಬಸವೇಶ್ವರ ಬಡಾವಣೆಯಲ್ಲಿ ಅನೇಕ ಮಂದಿಯ ಮನೆಯಂಗಳಗಳ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ಈಗಾಗಲೇ ನೀರಿಲ್ಲದೇ ಸ್ಥಗಿತಗೊಂಡಿವೆ. ಕೆರೆ, ಕಟ್ಟೆ, ಬಾವಿಗಳು ನೀರಿಲ್ಲದೇ ಬತ್ತುತ್ತಿವೆ. ಈಗಾಗಲೇ ನಾಡಿನ ಜೀವನದಿ ಕಾವೇರಿಯೂ ಕೂಡ ಕೈಚೆಲ್ಲಿ ಕೂತಿದ್ದಾಳೆ. ದಶಕಗಳ ಹಿಂದೆ ವರ್ಷವಿಡೀ ಬೇಸಿಗೆಯಲ್ಲೂ ನೀರನ್ನು ಹರಿಸಿ ಜೀವಕೋಟಿಗಳ ದಾಹ ನೀಗಿಸುತ್ತಿದ್ದ ಕಾವೇರಿ ಇತ್ತೀಚಿನ ವರ್ಷಗಳಲ್ಲಿ ಒಣಗುತ್ತಿದ್ದಾಳೆ. ಕೆಲವೊಂದು ಕಡೆ ಸಾವಿರ ಅಡಿ ಕೊರೆದರೂ ಕೂಡ ಕೊಳವೆ ಬಾವಿಗಳಲ್ಲಿ ನೀರೇ ಬರುತ್ತಿಲ್ಲ.
-ವರದಿ : ಕೆ.ಎಸ್. ಮೂರ್ತಿ