ಮಡಿಕೇರಿ, ಮಾ. ೭ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಅನುಕೂಲವಾಗುವ ಕೆಲವೊಂದು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮುಖ್ಯವಾಗಿ ಜಿಲ್ಲೆಯಲ್ಲಿ ಕೆಲವು ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.

ಇದಲ್ಲದೆ ರಸ್ತೆ - ಸೇತುವೆ ಹಾನಿಗೆ ರೂ. ೨೦ ಕೋಟಿ, ಕೂಡಿಗೆ ಕ್ರೀಡಾ ಶಾಲೆ ಅಭಿವೃದ್ಧಿ, ಭೂ ಕುಸಿತದ ತಡೆ, ವಸತಿ ಶಾಲೆ ಮೇಲ್ದರ್ಜೆ ವಿಚಾರ, ಕೆ.ಶೀಟ್ ಯೋಜನೆಯಡಿ ರಸ್ತೆ ಅಭಿವೃದ್ಧಿಯಂತಹ ವಿಚಾರಗಳು ಸೇರಿವೆ. ಇದಲ್ಲದೆ ರಾಜ್ಯ ವ್ಯಾಪಿಯಾಗಿ ಪ್ರಕಟಿಸಿರುವ ಕೆಲವೊಂದು ಯೋಜನೆಗಳ ಪ್ರಯೋಜನ ಕೊಡಗು ಜಿಲ್ಲೆಗೂ ವಿಶೇಷವಾಗಿ ಅನ್ವಯವಾಗಲಿದ್ದು ಕೆಲವು ಅಂಶಗಳು ಪ್ರಯೋಜನಕಾರಿಯಾಗಲಿದೆ ಎಂಬದು ಕೊಡಗಿಗೆ ಸಂಬAಧಿಸಿದ ಪ್ರಮುಖ ವಿಚಾರಗಳಾಗಿವೆ.

ಏನೇನು...?

ಹೊಸದಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕಿನಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂಬುದು ಪ್ರಮುಖವಾಗಿದೆ. ಇದರೊಂದಿಗೆ ವೀರಾಜಪೇಟೆಯಲ್ಲಿರುವ ೧೫೦ ಬೆಡ್ ಸಾಮರ್ಥ್ಯದ ಆಸ್ಪತ್ರೆಯನ್ನು ೪೦೦ ಬೆಡ್ ಸಾಮರ್ಥ್ಯದ ಆಸ್ಪತ್ರೆಯಾಗಿ ಪರಿವರ್ತಿಸುವುದು, ಕುಶಾಲನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ನವೀಕರಣಗೊಳಿಸುವ ವಿಚಾರವೂ ಬಜೆಟ್‌ನಲ್ಲಿ ಸೇರಿದೆ.

ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ಐದು ವಸತಿ ಶಾಲೆಗಳನ್ನು ೧೨ನೇ ತರಗತಿಯವರೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದೂ ಪ್ರಕಟಿಸಲಾಗಿದೆ.

ರಸ್ತೆ-ಸೇತುವೆಗೆ ರೂ. ೨೦ ಕೋಟಿ

ಕೊಡಗು ಜಿಲ್ಲೆಯ ವೀರಾಜಪೇಟೆ, ಪೊನ್ನಂಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಹಾನಿಗೆ ಒಳಗಾಗಿರುವ ರಸ್ತೆ ಮತ್ತು ಸೇತುವೆಯನ್ನು ರೂ. ೨೦ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.

ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ರೂ. ೩ ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆಯಾಗಿದೆ.

(ಮೊದಲ ಪುಟದಿಂದ) ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳೊಂದಿಗೆ ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ತಡೆಗೆ ರೂ. ೨೦೦ ಕೋಟಿಯನ್ನು ಪ್ರಕಟಿಸಲಾಗಿದೆ.

ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳಾದ ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ಪ್ರಜಾಸೌಧ ಕಾಮಗಾರಿಗಳ ಅಭಿವೃದ್ಧಿ ಕಾಮಗಾರಿಯ ವಿಚಾರವೂ ಪ್ರಸ್ತಾಪವಾಗಿದೆ. ಕೆ.ಶೀಟ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ರಸ್ತೆಗಳ ವಿವರದಲ್ಲಿ ಮಡಿಕೇರಿ-ದೋಣಿಗಲ್ (ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗ)ನ ೯೫ ಕಿ.ಮೀ. ಸೇರಿದೆ.

ಇವುಗಳಲ್ಲದೆ ವನ್ಯಪ್ರಾಣಿ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ದಯಾತ್ಮಕ ಧನವನ್ನು ೧೫ ಲಕ್ಷ ದಿಂದ ರೂ. ೨೦ ಲಕ್ಷಕ್ಕೆ ಏರಿಸುವ ಅಂಶ, ಒಲಂಪಿಕ್ಸ್, ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳ ಸೇವೆಯನ್ನು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಪಡೆಯುವುದು, ಜಿಲ್ಲೆಗೆ, ಜಿಲ್ಲೆಯವರಿಗೆ ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಮಾನವ -ಆನೆ ಸಂಘರ್ಷದ ಸಮಸ್ಯೆಯನ್ನು ಪರಿಹರಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೨೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ‘ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ’ ಸ್ಥಾಪಿಸಲು ೨೦ ಕೋಟಿ ರೂ. ನೀಡುವುದು. ಕೊಡಗಿನಲ್ಲಿ ಸೆರೆಹಿಡಿಯುವ ಆನೆಗಳನ್ನು ಸೇರಿಸಲು ನೆರವಾಗಲಿದೆ ಎಂಬದು ಈ ಬಾರಿಯ ಬಜೆಟ್‌ನ ಮೂಲಕ ಕೊಡಗಿಗೆ ಅನ್ವಯವಾಗಲಿರುವ ಒಂದಷ್ಟು ಪ್ರಮುಖ ಅಂಶಗಳಾಗಿವೆ.

ಹಾಲಿ ಜನಪ್ರತಿನಿಧಿಗಳ ಅನಿಸಿಕೆ

ಈ ಬಾರಿಯ ಬಜೆಟ್‌ನ ಕುರಿತಾಗಿ ಜಿಲ್ಲೆಯ ಹಾಲಿ ಜನಪ್ರತಿನಿಧಿಗಳಾಗಿರುವ ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಅನಿಸಕೆ ಇಂತಿದೆ.

ಕೊಡಗು ಜಿಲ್ಲೆಯ ಮಟ್ಟಿಗೆ ಈ ಬಾರಿಯ ಬಜೆಟ್ ಐತಿಹಾಸಿಕವಾಗಿದೆ. ಈ ತನಕ ಜಿಲ್ಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಕೊಡುಗೆ ಬಜೆಟ್‌ನಲ್ಲಿ ದೊರೆತಿರಲಿಲ್ಲ ಎಂಬದು ಉಲ್ಲೇಖನೀಯ. ರಾಜ್ಯಕ್ಕೆ ಸಂಬAಧಿಸಿದAತೆ ಹೇಳುವುದಾದರೆ ರಾಜ್ಯದ ಸಮಗ್ರ ಹಿತದೃಷ್ಟಿಯೊಂದಿಗೆ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಬಜೆಟ್ ಆಗಿದೆ. ಚುನಾವಣೆ ಸಂದರ್ಭ ಭರವಸೆಗಳಿಗೂ ಒತ್ತು ನೀಡಲಾಗಿದೆ. ಆರ್ಥಿಕ ಶಿಸ್ತು ಕಾಪಾಡುವ ಪ್ರಯತ್ನವನ್ನೂ ಮಾಡಲಾಗಿದೆ.

- ಎ.ಎಸ್. ಪೊನ್ನಣ್ಣ, ವೀರಾಜಪೇಟೆ ಶಾಸಕ

ಈ ಬಾರಿಯ ಬಜೆಟ್ ಕೊಡಗು ಜಿಲ್ಲೆಗೆ ಅದ್ಭುತ ಕೊಡುಗೆಯಾಗಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರಾಧ್ಯಾನತೆ ದೊರೆತಿದೆ. ಇನ್ನಿತರ ಹಲವು ಯೋಜನೆಗಳಿಗೂ ಜಿಲ್ಲೆಗೆ ಪೂರಕವಾಗಿದೆ. ಮುಖ್ಯವಾಗಿ ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂವ್‌ಮೆAಟ್ ಪ್ರೋಗಾಂ (ಕೆ.ಶೀಟ್) ಕಾಮಗಾರಿಯಡಿ ಮಡಿಕೇರಿ - ದೋಣಿಗಲ್ ರಸ್ತೆ (ಓಊ ೭೫)ಗೆ ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗವಾಗಿ ಸೇರುವ ಅಭಿವೃದ್ಧಿ ಯೋಜನೆ ಕೂಡ ದೊಡ್ಡ ಕೊಡುಗೆ. ಕುಶಾಲನಗರ, ಪೊನ್ನಂಪೇಟೆ ನೂತನ ತಾಲೂಕಿಗೆ ನೂತನವಾಗಿ ಪ್ರಜಾಸೌಧ ಕಟ್ಟಡವೂ ದೊರೆತಿದೆ.

- ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಬಜೆಟ್ ನಿರಾಶಾದಾಯಕವಾಗಿದೆ. ಇದು ರಾಜ್ಯದಲ್ಲಿ ಕೇವಲ ಒಂದು ವರ್ಗವನ್ನು ಓಲೈಕೆ ಮಾಡುವಂತಿದೆ. ಕೊಡಗಿನ ಮಟ್ಟಿಗೂ ಸಾಕಷ್ಟು ನಿರೀಕ್ಷೆಗಳಿದ್ದರೂ ಯಾವುದೂ ಪರಿಗಣನೆಗೆ ಬಂದಿಲ್ಲ. ರಸ್ತೆ - ಸೇತುವೆಗೆ ರೂ. ೨೦ ಕೋಟಿ ಹಣ ಎಂದಿರುವುದನ್ನು ಒಪ್ಪಲಾಗದು. ಕನಿಷ್ಟ ರೂ. ೨೦೦ ಕೋಟಿ ಬೇಕಿತ್ತು. ಆಸ್ಪತ್ರೆಗಳ ವಿಚಾರವನ್ನು ಒಂದಷ್ಟು ಸ್ವಾಗತಿಸಬಹುದಷ್ಟೆ. ಪ್ರವಾಸೋದ್ಯಮವನ್ನೂ ಕಡೆಗಣಿಸಲಾಗಿದೆ ಓಲೈಕೆ ರಾಜಕಾರಣವನ್ನು ಬಜೆಟ್‌ನಲ್ಲೂ ಮುಂದುವರಿಸಲಾಗಿದೆ.

ಸುಜಾ ಕುಶಾಲಪ್ಪ, ವಿಧಾನಪರಿಷತ್ ಸದಸ್ಯ